ಬಂಟ್ವಾಳ ತಾಲೂಕಿನ ಶಾಲೆ, ಕಾಲೇಜು, ಸರಕಾರಿ ಕಚೇರಿ, ಕೋರ್ಟು ಆಡಳಿತ ಹಾಗೂ ಸಂಘ ಸಂಸ್ಥೆಗಳು ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಿದವು. ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ತಾಲೂಕು ಮಟ್ಟದ ಆಚರಣೆ ನಡೆಯಿತು.
ತಹಶೀಲ್ದಾರ್ ರಶ್ಮಿ ಎಸ್.ಆರ್. ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ ಸಂವಿಧಾನದ ಚೌಕಟ್ಟಿಗೆ ಒಳಪಟ್ಟು ಆಡಳಿತ ನಡೆಸುತ್ತಿರುವುದು ಹೆಮ್ಮೆಯ ವಿಷಯ, ನಾವಿಂದು ಸ್ವಾಂತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಮೇಲ್ಪಂಕ್ತಿಯಲ್ಲಿಟ್ಟು ಜೀವನ ನಡೆಸಬೇಕು ಎಂದರು. ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ ಬೇರೆ ಬೇರೆ ಚಳುವಳಿಯ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನುಭಾವರ ನೆನಪು ಮಾಡಬೇಕಾಗಿದೆ ಎಂದರು.
ಪ್ರಧಾನ ಬಾಷಣಕಾರರಾಗಿದ್ದ ಮಂಗಳೂರಿನ ರಥಬೀದಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ. ನಾಗವೇಣಿ ಮಂಚಿ ಮೌಲ್ಯಯುತವಾದ ಉಚಿತ ಕಡ್ಡಾಯ ಶಿಕ್ಷಣ ಸಿಕ್ಕಾಗ ಅಲ್ಲಿ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ, ಪ್ರಜ್ಞಾವಂತರ ನಾಡು ಅದಾಗುತ್ತದೆ ಎಂದರು. ನೈತಿಕವಾಗಿ ಜೀವನ ಮೌಲ್ಯ ಗಳನ್ನು ಕಲಿತುಕೊಂಡು ಆತ್ಮ ಶಕ್ತಿಯ ಮೂಲಕ ಬದುಕಲು ಕಲಿಯಬೇಕು ಅಲ್ಲಿ ಸ್ವಾತಂತ್ರ್ಯ, ಪ್ರೀತಿ ವಿಶ್ವಾಸ ಇರಲು ಸಾಧ್ಯ. ದೇಶದ ಜೊತೆ ಬದುಕನ್ನು ಪ್ರೀತಿಸುವ ಪರಿಸರ ನಿರ್ಮಾಣ ಮಾಡೋಣ ಎಂದರು. ಗೌರವರಕ್ಷೆ ಸ್ವೀಕರಿಸಿ ಮಾತನಾಡಿದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಸ್ವಚ್ಚ ಭಾರತವಾಗಬೇಕಾದರೆ ನಾವು ಸ್ವಚ್ಚ ಬಂಟ್ವಾಳ ಆಭಿಯಾನ ನಡೆಸಬೇಕಾಗಿದೆ ಎಂದರು. ತಾಪಂ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಆಲಿ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಬಿಇಒ ಜ್ಞಾನೇಶ್ ಉಪಸ್ಥಿತರಿದ್ದರು.
ಧ್ವಜಾರೋಹಣಕ್ಕೆ ಮೊದಲು ಪೋಲೀಸ್ , ಗೃಹರಕ್ಷಕ ದಳ, ಎನ್.ಸಿ.ಸಿ.ಭಾರತ ಸೇವಾದಳ, ಸ್ಕೌಟ್ಸ್ ಗೈಡ್ಸ್ ಕಬ್-ಬುಲ್ ಬುಲ್ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ತುಕುಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಸಭಾ ಕಾರ್ಯಕ್ರಮ ದ ಬಳಿಕ ಪುರಸಭಾ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ, ಪ್ರೌಡ ಶಾಲಾ ವಿದ್ಯಾರ್ಥಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ವತಿಯಿಂದ ಕಾರ್ಯಕ್ರಮಗಳು ನಡೆದವು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿದರು. ಬಂಟ್ವಾಳ ಅರಣ್ಯ ಇಲಾಖೆಯ ವಲಯಾರಣ್ಯಾಧಿಕಾರಿ ಸುರೇಶ್ ಬಿ. ನೇತೃತ್ವದಲ್ಲಿ ಅರಣ್ಯ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಗಿಡವಿತರಣೆ, ಶಿಕ್ಷಣ ಇಲಾಖೆಯ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಣೆ ನಡೆಯಿತು. ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಶಿಕ್ಷಣಾಧಿಕಾರಿ ಜ್ಞಾನೇಶ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.