ಶುಕ್ರವಾರ ರಾತ್ರಿಯಿಂದ ಶನಿವಾರ ರಾತ್ರಿವರೆಗೆ ಇದ್ದ ಸ್ಥಿತಿ ಬಂಟ್ವಾಳ ತಾಲೂಕಿನಲ್ಲಿ ಭಾನುವಾರ ಇಲ್ಲ. ಎಲ್ಲವೂ ಉಲ್ಟಾ. ರಸ್ತೆಗಳೆಲ್ಲ ಕಾಣಿಸತೊಡಗಿವೆ. ಜಲದಿಗ್ಬಂಧನ ತೆರವಾಗಿದೆ. ನೆರೆ ಇಳಿದಿದೆ. ಮುನಿದ ನೇತ್ರಾವತಿ ಶಾಂತವಾಗಿ ಹರಿಯುತ್ತಿದ್ದರೆ, ಪ್ರವಾಹ ಸಂತ್ರಸ್ತರು ಮನೆಯತ್ತ ಹೋಗುತ್ತಿದ್ದಾರೆ. ಮನೆಯಲ್ಲಿದ್ದು ಸಮಸ್ಯೆ ಅನುಭವಿಸಿದವರು ಸ್ವಚ್ಛತೆಯತ್ತ ಗಮನ ಕೊಡುತ್ತಿದ್ದಾರೆ. ಆದರೆ…
ಮನೆಯಲ್ಲಿ ಕರೆಂಟಿಲ್ಲ, ನೀರೂ ಇಲ್ಲ. ಬಟ್ಟೆಗಳು ಒದ್ದೆಯಾಗಿವೆ, ದಿನಸಿ ವಸ್ತುಗಳಿಲ್ಲ. ಈ ರೀತಿ ಸಹಾಯ ಕೇಂದ್ರಗಳಲ್ಲಿದ್ದವರಷ್ಟೇ ಅಲ್ಲ, ಮನೆಯವರೂ ದಿಗಿಲುಗೊಂಡಿದ್ದಾರೆ ಮನೆಗಳಲ್ಲಿ ಹಗಲು ರಾತ್ರಿ ನೀರು ನುಗ್ಗಿದ ಜಾಗವನ್ನು ಸ್ವಚ್ಛಗೊಳಿಸಲು ನೀರೇ ಇಲ್ಲ ಎಂಬಂಥ ಸ್ಥಿತಿಯೂ ಇದೆ. ಇನ್ನು ಅಂಗಡಿ, ಮುಂಗಟ್ಟುಗಳವರ ಸ್ಥಿತಿ ಇದಕ್ಕಿಂತ ಭಿನ್ನವೇನಲ್ಲ. ಕೆಸರು ತೆಗೆಯುವ ಕಾರ್ಯದಲ್ಲೀಗ ಎಲ್ಲರೂ ನಿರತ..
ಈಗಾಗಲೇ ಆರೋಗ್ಯ, ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿರುವ ರಾಜೇಶ್ ನಾಯ್ಕ್, ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರೂ ಈ ಕುರಿತು ಅಲರ್ಟ್ ಆಗಿರುವಂತೆ ತಿಳಿಸಿದ್ದಾರೆ. ಬಂಟ್ವಾಳ ಪುರಸಭೆ ವತಿಯಿಂದ ಸ್ವಚ್ಛತಾ ಕಾರ್ಯ, ನೀರಿಲ್ಲದ ಕಡೆಗೆ ನೀರೊದಗಿಸುವ ಕಾರ್ಯವೂ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ತಿಳಿಸಿದ್ದಾರೆ. ಎಲ್ಲ ಕಡೆ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ವಸ್ತುಗಳನ್ನು ಒದಗಿಸುವ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ರಶ್ಮಿ ಎಸ್. ಆರ್. ತಿಳಿಸಿದ್ದಾರೆ.
ಇನ್ನೊಂದೆಡೆ ಬಂಟ್ವಾಳ ಪೇಟೆಯ ಕೆಲವೆಡೆ ರಸ್ತೆಗಳೂ ಮಳೆಯಿಂದ ಹಾಳಾಗಿವೆ. ಕೊಟ್ರಮಣಗಂಡಿ ರಸ್ತೆಯ ಚಿತ್ರವಿದು. ಇದಲ್ಲದೆ ರಸ್ತೆಯ ಇಕ್ಕೆಲಗಳಲ್ಲೂ ಕೆಸರುತುಂಬಿವೆ.
ಸಂಪರ್ಕ ಕಡಿತಗೊಂಡಿದ್ದ ತಾಲೂಕಿನ ಎಲ್ಲ ರಸ್ತೆಗಳಲ್ಲೂ ಈಗ ಸಂಚಾರಕ್ಕೆತೊಂದರೆ ಇಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ