ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆ ಶುಕ್ರವಾರವೂ ಮುಂದುವರಿದಿದ್ದು, ಮಧ್ಯಾಹ್ನದವರೆಗಿನ ವರದಿಯಂತೆ ಜಿಲ್ಲೆಯ ಜೀವನದಿ ನೇತ್ರಾವತಿ ಹಲವೆಡೆ ಉಕ್ಕಿ ಹರಿದಿದೆ. ಬಂಟ್ವಾಳ ಸಹಿತ ಧರ್ಮಸ್ಥಳದಿಂದ ಮಂಗಳೂರಿನವರೆಗೆ ನೇತ್ರಾವತಿ ನದಿ ಅಪಾಯದ ಮಟ್ಟದಲ್ಲಿದ್ದು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕಿನ ಹಲವೆಡೆ ಹಾನಿಗಳುಂಟಾಗಿದ್ದು, ಕೆಲವೆಡೆ ಮನೆಯಿಂದ ಹೊರಬರಲೂ ಆಗದಂಥ ಸ್ಥಿತಿ ನಿರ್ಮಾಣವಾಗಿದೆ. ಬಂಟ್ವಾಳದಲ್ಲಿ ಈಗಾಗಲೇ ಅಪಾಯದ ಮಟ್ಟ ಮೀರಿ ನೇತ್ರಾವತಿ ಹರಿಯುತ್ತಿದ್ದು, ಸಂಜೆ ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ, 10 ಮೀಟರ್ ತಲುಪುವ ಸಾಧ್ಯತೆಯೂ ಇದೆ.
ಘಟ್ಟದ ರಸ್ತೆಗಳೆಲ್ಲವೂ ಅಪಾಯದಲ್ಲಿದ್ದು, ಕೆಲವೆಡೆ ಸಣ್ಣ ಸೇತುವೆಗಳು ಮುಳುಗಿವೆ. ಪ್ರತಿ ತಾಲೂಕುಗಳಲ್ಲಿ ಅಧಿಕಾರಿಗಳು ಪರಿಹಾರ ಕಾರ್ಯಗಳಲ್ಲಿ ನಿರತರಾಗಿದ್ದು, ಜನಪ್ರತಿನಿಧಿಗಳು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.