ಬಂಟ್ವಾಳ, ಬಿ.ಸಿ. ರೋಡು ಸುತ್ತಮುತ್ತ ಸೋಮವಾರ ಮಳೆ ಸುರಿಯುತ್ತಿದ್ದರೂ ನಾಗರಪಂಚಮಿ ಆಚರಣೆಗೆ ಅಡ್ಡಿಯಾಗಲಿಲ್ಲ. ಕೈಕಂಬ ಕಡಪಿಕರಿಯ ಕುಟುಂಬದಲ್ಲಿ ನಾಗರ ಪಂಚಮಿ ಪ್ರಧಾನ ಅರ್ಚಕ ಪುರೋಹಿತ್ ಮೊಗರ್ನಾಡು ರಾಜ ಗೋಪಾಲ ಆಚಾರ್ಯ ನೇತೃತ್ವದಲ್ಲಿ ಸಹಾಯಕ ಅರ್ಚಕರಿಂದ ವೈದಿಕ ಕಾರ್ಯಕ್ರಮ ನಡೆಯಿತು. ಶ್ರೀ ನಾಗದೇವರ ಪ್ರತಿಮೆಗೆ ಹಾಲೆರೆಯುವ ಮೂಲಕ ಪೂಜಾ ವಿಧಿ ವಿಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಕುಟುಂಬದ ಯಜಮಾನ ಸದಾಶಿವ ಕೈಕಂಬ ಮತ್ತು
ಸದಸ್ಯರು ಶ್ರೀ ನಾಗದೇವರ ಭಕ್ತಿ ಪ್ರಸಾದವನ್ನು ಸ್ವೀಕರಿಸಿ, ಆರ್ಶೀವಾದ ಪಡೆದರು.
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಶ್ರೀ ರಕ್ತೇಶ್ವರಿ ದೇವಸ್ಥಾನ, ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನ, ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನ ಸಹಿತ ತಾಲೂಕಿನ ಪ್ರಮುಖ ದೇವಸ್ಥಾನಗಳಲ್ಲಿರುವ ನಾಗಸನ್ನಿಧಿಗಳಲ್ಲಿ ಭಕ್ತರು ಹಾಲು ಸೀಯಾಳಾಭಿಷೇಕ ಮಾಡುವುದರ ಮೂಲಕ ನಾಗರಪಂಚಮಿ ಆಚರಿಸಿದರು. ಸರಕಾರಿ ಕಚೇರಿ, ಬ್ಯಾಂಕುಗಳಲ್ಲಿ ಜನಸಂದಣಿ ಕಡಿಮೆ ಇತ್ತು. ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.