ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪೊಲೀಸರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ ಎಂದು ಫರಂಗಿಪೇಟೆ ಸೇವಾಂಜಲಿಯ ಆಡಳಿತ ಟ್ರಸ್ಟಿ ಕೃಷ್ಣಕುಮಾರ ಪೂಂಜ ಹೇಳಿದ್ದಾರೆ.
ಬಂಟ್ವಾಳ ನಗರ ಠಾಣೆಯಲ್ಲಿ ಸೇವೆ ಸಲ್ಲಿಸಿ ಇದೀಗ ವಿವಿಧ ಠಾಣೆಗೆ ವರ್ಗಾವಣೆ ಹೊಂದಿರುವ ಸಿಬ್ಬಂದಿ ಗಳಿಗೆ ಬಿಸಿರೋಡಿನ ರಂಗೋಲಿ ಸಭಾಂಗಣದಲ್ಲಿ ಬೀಳ್ಕೋಡುಗೆ ಕಾರ್ಯಕ್ರಮದ ಸಂದರ್ಭ ಸಾಧಕರಿಗೆ ಸನ್ಮಾನ ಹಿನ್ನೆಲೆಯಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಪೊಲೀಸರೆಂದರೆ ಸೈನಿಕರಂತೆ. ಗಡಿಯಲ್ಲಿ ಸೈನಿಕರು ಹೇಗೆ ಶತ್ರುಗಳೊಂದಿಗೆ ಹೋರಾಡುತ್ತಾರೋ ಹಾಗೆಯೇ ಸಮಾಜಘಾತುಕ ಶಕ್ತಿಗಳಿಂದ ನಾಗರಿಕರನ್ನು ರಕ್ಷಣೆ ಮಾಡುವುದು ಪೊಲೀಸರ ಕೆಲಸ. ಅವಿಶ್ರಾಂತ ದುಡಿಮೆಯ ಪೊಲೀಸ್ ಸಿಬ್ಬಂದಿ ಅನುಕರಣೀಯ ಮತ್ತು ಅಭಿನಂದನೀಯ ಎಂದು ಅವರು ಹೇಳಿದರು.
ಬಂಟ್ವಾಳ ನಗರ ಠಾಣೆ ಯ ಅಪರಾಧ ವಿಭಾಗದ ಎಸ್.ಐ.ಅಗಿ ಸೇವೆ ಸಲ್ಲಿಸಿ ಸುಳ್ಯ ಠಾಣೆಗೆ ವರ್ಗಾವಣೆಗೊಂಡಿರುವ ಎಂ. ಆರ್. ಹರೀಶ್ ಸೇರಿದಂತೆ ನಾನಾ ಠಾಣೆಗಳಿಗೆ ವರ್ಗಾವಣೆ ಗೊಂಡಿರುವ ಸುಮಾರು 12 ಸಿಬ್ಬಂದಿಯನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಸನ್ಮಾನಿಸಿ ಬೀಳ್ಕೊಟ್ಟರು.
ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಕುಮಾರ ಪೂಂಜ ಅವರನ್ನು ಸನ್ಮಾನಿಸಲಾಯಿತು. ಪೋಲೀಸ್ ಇಲಾಖೆಗೆ ಕಲ್ಯಾಣ ಮಂಟಪ ಕ್ಕಾಗಿ ಒಂದು ಎಕರೆ ಜಮೀನು ಗುರುತಿಸಿ ರೆಕಾರ್ಡ್ ಮಾಡಲು ಸಹಕಾರ ನೀಡಿದ ಮಹಮ್ಮದ್ ನಂದಾವರ ಹಾಗೂ ಸದಾಶಿವ ಪ್ರಭು ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿ ದ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್ , ಬಂಟ್ವಾಳ ವೃತ್ತದಲ್ಲಿ ಕೆಲಸ ಮಾಡುವ ಪ್ರತಿ ಪೋಲೀಸ್ ಅಧಿಕಾರಿಗಳು ಒತ್ತಡದ ಮಧ್ಯೆಯೂ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಬಂಟ್ವಾಳ ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ, ಬಂಟ್ವಾಳ ನಗರ ಠಾಣಾ ಅಪರಾಧ ವಿಭಾಗದ ಎಸ್.ಐ.ಸುಧಾಕರ ತೋನ್ಸೆ ಪ್ರೋಬೆಶನರಿ ಎಸ್.ಐ.ಗಳಾದ ನಾಗೇಶ್, ವಿನಾಯಕ್ ಉಪಸ್ಥಿತರಿದ್ದರು. ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಪ್ರಸ್ತಾವಿಕವಾಗಿ ಮಾತನಾಡಿ ದರು. ನಗರ ಠಾಣಾ ಸಿಬ್ಬಂದಿ ನಾಗರಾಜ್ ವಂದಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ಬಿ. ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.