ಬಂಟ್ವಾಳ ಕ್ಷೇತ್ರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆ ಮತ್ತು ಬೇಕಾದ ಸೌಲಭ್ಯಗಳ ಬಗ್ಗೆ ವಿವರವಾದ ಪಟ್ಟಿ ನೀಡುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದಾರೆ.
ಶುಕ್ರವಾರ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ,ಇಲ್ಲಿನ ಬೇಡಿಕೆಯ ಕುರಿತು ಮಾಹಿತಿ ಪಡೆದುಕೊಂಡ ಬಳಿಕ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರಿಗೆ ಈ ಸೂಚನೆ ನೀಡಿದರು.
ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸದಾಶಿವ ಅವರು ಆಸ್ಪತ್ರೆಗೆ ತುರ್ತಾಗಿ ಅರಿವಳಿಕೆ ತಜ್ಙರ ಅಗತ್ಯ, ಯೋಗಶಾಲೆಯಲ್ಲಿ ರಕ್ತಮಾದರಿ ಪರೀಕ್ಷೆಯ ತಜ್ಙರು, ಎಕ್ಸರೇ ತಜ್ಙರು,ನಸ್೯, ಸಿಬಂದಿಗಳ ಹುದ್ದೆ ಖಾಲಿ ಇರುವುದನ್ನು ಶಾಸಕರ ಗಮನಕ್ಕೆ ತರಲಾಯಿತು.ಈ ಸಂದರ್ಭ ಉಪಸ್ಥಿತರಿದ್ದ ಎ.ಜೆ.ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಅವರು ಶಾಸಕ ರಾಜೇಶ್ ನಾಯ್ಕ್ ಅವರ ಕೋರಿಕೆಯಂತೆ ತಾತ್ಕಾಲಿಕ ನೆಲೆಯಲ್ಲಿ ಕೆಲ ವೈದ್ಯರನ್ನು ಹಾಗು ರಕ್ತ ಪರೀಕ್ಷೆ ತಜ್ಙರನ್ನು ಒದಗಿಸಿಕೊಡುವ ಭರವಸೆ ನೀಡಿದರು.
ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿದರೆ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯಾಕಾಧಿಕಾರಿ ಡಾ.ದೀಪಾ ಪ್ರಭು ತಿಳಿಸಿದರು. ಹಾಗೆಯೇ ಆಸ್ಪತ್ರೆಗೆ ಹಗಲು ಮತ್ತು ರಾತ್ರಿ ವೇಳೆ ಸೆಕ್ಯೂರಿಟಿ ವ್ಯವಸ್ಥೆ ಕಲ್ಪಿಸುವಂತೆ ನೌಕರರು ಶಾಸಕರಲ್ಲಿ ಮನವಿ ಮಾಡಿದರು. ಆಸ್ಪತ್ರೆಯಲ್ಲೇ ಒ.ಪಿ.ತೆರೆದು ಹಗಲು,ರಾತ್ರಿ ಪೊಲೀಸ್ ಕಾನ್ಸಟೇಬಲ್ ಒಬ್ಬರನ್ನು ನಿಯುಕ್ತಿಗೊಳಿಸುವುದು ಸೂಕ್ತ ಎಂದು ಉಪಸ್ಥಿತರಿದ್ದ ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ದೇವದಾಸ ಶೆಟ್ಟಿ ಸಲಹೆ ನೀಡಿದರು. ಈ ಸಂದರ್ಭ ಪುರಸಭಾ ಸದಸ್ಯರಾದ ಹರಿಪ್ರಸಾದ್,ಸರಪಾಡಿ ಗ್ರಾಪಂ ಸದಸ್ಯ ಧನಂಜಯ ಶೆಟ್ಟಿ ಮೊದಲಾದವರಿದ್ದರು.
ಇದಾದ ಬಳಿಕ ಶಾಸಕರು ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಪರಿಶೀಲಿಸಿದರು.