ಕೀರ್ತಿಶೇಷ ಬೊಂಡಾಲ ಜಗನ್ನಾಥ ಶೆಟ್ಟಿ ೭ನೇ ವರ್ಷದ ಪುಣ್ಯಸ್ಮರಣೆ, ಕಲ್ಲಡ್ಕ ವಲಯ ಸರಕಾರಿ ಪ್ರೌಢಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜು. ೩೧ರಂದು ಶಂಭೂರು ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಬೊಂಡಾಲ ಚಾರಿಟೇಬಲ್ ಟ್ರಸ್ಟ್(ರಿ.), ಯುವಸಂಗಮ ಸೇವಾ ಟ್ರಸ್ಟ್ (ರಿ) ಬೊಂಡಾಲ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಹಿರಿಯ ಪತ್ರಕರ್ತ, ದಿ| ಜಗನ್ನಾಥ ಶೆಟ್ಟರ ಸಮೀಪವರ್ತಿ ರಾಜಾ ಬಂಟ್ವಾಳ ಮಾತನಾಡಿ ಸಾಮಾನ್ಯ ವ್ಯಕ್ತಿ ತನ್ನ ಸಾಧನೆಯಿಂದ ಜನಮಾನಸದಲ್ಲಿ ಶಾಶ್ವತವಾಗಿ ನೆಲೆ ನಿಲ್ಲುತ್ತಾರೆ. ಬೊಂಡಾಲ ಎಂಬ ಹಳ್ಳಿಯಿಂದ ಹುಟ್ಟಿ ಬಂದ ಜಗನ್ನಾಥ ಶೆಟ್ಟಿ ಅವರು ತಮ್ಮ ಪ್ರತಿಭೆ, ಸಾಧನೆಗಳ ಮೂಲಕ ಚಿರಸ್ಥಾಯಿಯಾಗಿದ್ದಾರೆ. ಅನೇಕ ಸಾಮಾಜಿಕ ಸೇವೆಯಲ್ಲಿ ತನ್ನ ಒಡನಾಟ ಸ್ಮರಿಸುತ್ತಾ ನುಡಿ ನಮನ ಸಲ್ಲಿಸಿದರು.
ಜಿ.ಪಂ. ನಿವೃತ್ತ ಇಂಜಿನಿಯರ್ ಬೊಂಡಾಲ ಸೀತಾರಾಮ ಶೆಟ್ಟಿ , ಮಾತನಾಡಿ ಹಳ್ಳಿ ಪ್ರದೇಶದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ದಿ| ಜಗನ್ನಾಥ ಶೆಟ್ಟಿ ಶಾಲೆ ನಿರ್ಮಾಣ ಮಾಡಿದ್ದರಿಂದ ಶೈಕ್ಷಣಿಕ ಅಭಿವೃದ್ಧಿಯೊಂದಿಗೆ ಊರಿನ ಅಭಿವೃದ್ಧಿಯಾಗಿದೆ ಪೂರಕವಾಗಿದೆ.
ಶಿಕ್ಷಕ ನಾರಾಯಣ ಗೌಡ ಮಾತನಾಡಿ ಅಂದಿನ ಕಾಲದಲ್ಲಿ ಊರಿನಲ್ಲಿ ೭ನೇ ಕ್ಲಾಸ್ ನಂತರ ಅನೇಕ ಹೆಮ್ಮಕ್ಕಳು ಹೈಸ್ಕೂಲ್ ಶಿಕ್ಷಣಕ್ಕೆ ಹೋಗುತ್ತಿರಲಿಲ್ಲ. ಅದಕ್ಕಾಗಿ ಇಲ್ಲೊಂದು ಶಿಕ್ಷಣ ಸಂಸ್ಥೆಗಾಗಿ ಪ್ರಯತ್ನಿಸಿದರು. ಅದನ್ನು ಸಾಧಿಸಿದರು. ಶಾಲೆಯ ಯಾವುದೇ ಬೇಕುಗಳಿಗೆ ಪ್ರಥಮ ಆದ್ಯತೆ ನೀಡುತ್ತಿದ್ದರು. ಅವರು ಕೀರ್ತಿಶೇಷರಾದರೂ ಶಾಲೆ ಇಂದಿಗೂ ಅವರ ಪ್ರಯತ್ನದ ಫಲವನ್ನು ಸ್ಮರಿಸುವುದು. ಶಾಲೆಯ ಪ್ರಸ್ತುತ ವರ್ಷದ ವಿದ್ಯಾರ್ಥಿಗಳಾದರೂ ಶೇ. ನೂರು ಫಲಿತಾಂಶ ಸಾಧನೆ ಮಾಡುವ ಮೂಲಕ ಅವರ ಆಶಯ ಈಡೇರುವಂತಾಗಬೇಕು ಎಂದು ಅಭಿಪ್ರಾಯ ನೀಡಿದರು.
ಇದೇ ಸಂದರ್ಭ ಪ್ರೌಢ ಶಾಲೆಯನ್ನು ಕಾಲೇಜಾಗಿ ಪರಿವರ್ತಿಸುವ ಅವರ ಆಶಯ ಈಡೇರಿಲ್ಲ. ಅಂದು ಕಾಲೇಜು ಕಟ್ಟಡ ನೀಲನಕ್ಷೆ ಕೂಡಾ ಮಾಡಲಾಗಿತ್ತು ಎಂದು ಅದನ್ನು ಹಾಲಿ ಶಾಲಾ ಆಡಳಿತಕ್ಕೆ ಹಸ್ತಾಂತರಿಸಿದರು.
ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರು ಮಾತನಾಡಿ ನನ್ನ ಸಹೋದರ ಶಾಲೆಯ ಕಾರ್ಯಚಟುವಟಿಕೆ, ಗಣೇಶೋತ್ಸವ ಹೊರತುಪಡಿಸಿ ಇನ್ಯಾವ ವಿಚಾರದಲ್ಲೂ ನನ್ನೊಂದಿಗೆ ಪ್ರಸ್ತಾಪಿಸುತ್ತಿರಲಿಲ್ಲ. ಶಾಲೆಯ ಪ್ರಸ್ತುತ ವಿದ್ಯಾರ್ಥಿಗಳಿಗೆ ಶಾಲೆಯ ಸ್ಥಾಪಕರ ಬಗ್ಗೆ ಹೆಚ್ಚಿನ ವಿಚಾರ ಗೊತ್ತಿರುವುದಿಲ್ಲ. ಅದಕ್ಕಾಗಿ ಅವರ ಸಂಸ್ಮರಣೆ ಕಾರ್ಯಕ್ರಮ ಹಾಕಿಕೊಳ್ಳಬೇಕು ಎಂದು ಆಡಳಿತ ಮಂಡಳಿಯ ಅಭಿಪ್ರಾಯದಂತೆ ಸಭಾಕಾರ್ಯದಲ್ಲಿ ವಿಷಯ ತಿಳಿಸಲಾಗಿದೆ. ಅವರ ಆತ್ಮಕ್ಕೆ ಭಗವಂತನು ಸಾಯುಜ್ಯವನ್ನು ನೀಡಲಿ ಎಂದು ಪ್ರಾರ್ಥಿಸಿದರು.
ನಿವೃತ್ತ ಹಿರಿಯ ಶಿಕ್ಷಕ ನಾಟಿ ಕೃಷ್ಣರಾಜ ಶೆಟ್ಟಿ ಮಾತನಾಡಿ ಬೊಂಡಾಲ ನನ್ನ ಶಿಷ್ಯ. ಕಣ್ಣೆದುರು ಬೆಳೆದ ಮಗು. ಅವನು ಒಬ್ಬ ಅಸಧಾರಣ ಛಲವನ್ನು ಹೊಂದಿದ್ದ. ಸಾಧನೆಗೆ ಒಬ್ಬ ಮಾದರಿ ವ್ಯಕ್ತಿತ್ವ ಹೊಂದಿದ್ದ. ರಾಜಕೀಯ ಅವನ ಆಸಕ್ತಿಯ ವಿಚಾರವಾಗಿತ್ತು. ಅವರ ಆತ್ಮಕ್ಕೆ ಈ ಮೂಲಕ ಸದ್ಗತಿ ಸಿಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕಲ್ಲಡ್ಕ ವಲಯದ ಸರಕಾರಿ ಪ್ರೌಢಶಾಲೆಗಳ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಶಂಭೂರು ಪ್ರೌಢಶಾಲೆಯ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕವಾಗಿ ದತ್ತು ಸ್ವೀಕಾರ ನಡೆಯಿತು.
ಶಿಕ್ಷಣ ಸಂಯೋಜಕಿ ಸುಶೀಲ, ಲ| ಸಂಜೀವ ಶೆಟ್ಟಿ ಬಿ.ಸಿ.ರೋಡ್ , ದೈಹಿಕ ಶಿಕ್ಷಕ ಕೆ. ಚಿನ್ನಪ್ಪ , ಹಳೇ ವಿದ್ಯಾರ್ಥಿ ಭವ್ಯ ಸಭೆ ಉದ್ದೇಶಿಸಿ ಮಾತನಾಡಿದರು.
ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ರೆಂಜೆಮಾರ್, ಯುವ ಸಂಗಮ ಕಾರ್ಯದರ್ಶಿ ಯಶೋಧರ ಕರ್ಬೆಟ್ಟು, ಮಹಿಳಾ ಮಂಡಳಿಯ ಅಧ್ಯಕ್ಷೆ ಶಾಲಿನಿ ರೆಂಜೆಮಾರ್, ಮುಖ್ಯಶಿಕ್ಷಕ ಕಮಲಾಕ್ಷ ಕಲ್ಲಡ್ಕ ಮತ್ತು ಶಿಕ್ಷಕರು, ಯುವ ಸಂಗಮ ಮತ್ತು ಮಹಿಳಾ ಮಂಡಳಿಯ ಸದಸ್ಯರು ಮತ್ತು ವಿದ್ಯಾರ್ಥಿಗಳು ನುಡಿ ನಮನ ಸಲ್ಲಿಸಿದರು. ಶಿಕ್ಷಕ ಸದಾಶಿವ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.