ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಶಾಲೆಗಳ ಒಕ್ಕೂಟ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಬಂಟ್ವಾಳದ ವಿದ್ಯಾಗಿರಿಯ ರಘುರಾಮ ಮುಕುಂದ ಪ್ರಭು ಶಾಲೆಯು 14ರ ಒಳಗಿನ ವಯೋಮಾನದವರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಗೆದ್ದು, ವಿನ್ನರ್ ತಂಡವಾಗಿ ಹೊರಹೊಮ್ಮಿದೆ.
ಜುಲೈ 25ರಂದು ಮಂಗಳೂರಿನ ಸೈಂಟ್ ತೆರೇಸಾ ಶಾಲೆಯಲ್ಲಿ ಜರುಗಿದ ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 26 ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿಜೇತ ತಂಡದಲ್ಲಿ ದೀನ್‌ರಾಮ್, ರಿಶೋನಾ ಪಿಂಟೋ, ಧ್ಯಾನ್‌ಕೃಷ್ಣ ಶೆಟ್ಟಿ, ರಿಯೋನಾ ಪಿಂಟೋ, ಅದ್ವಿತ್ ಶೆಟ್ಟಿ ಇವರುಗಳು ಸ್ಪರ್ಧಾಳುಗಳಾಗಿದ್ದು, 7ನೇ ತರಗತಿಯ ಧ್ಯಾನ್‌ಕೃಷ್ಣ ತೃತೀಯ ಬೋರ್ಡ್ ಸ್ಥಾನಕ್ಕೆ ಭಾಜನರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಚೆಸ್ ತರಬೇತುದಾರರಾದ ಚಂದ್ರಶೇಖರ ಭಂಡಾರಿ, ವಾಣಿಶ್ರೀ ಬಾಳಿಗಾ ತರಬೇತಿ ನೀಡಿದ್ದು, ಶಾಲಾ ಪ್ರಿನ್ಸಿಪಾಲ್ ರಮಾಶಂಕರ್ ಸಿ. ವಿದ್ಯಾರ್ಥಿಗಳ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಸಹೋದರ – ಸಹೋದರಿಯರ ಸಾಧನೆ:
ವಿಜೇತ ತಂಡದ ಸಾಧಕರಾದ ಧ್ಯಾನ್‌ಕೃಷ್ಣ ಮತ್ತು ದೀನ್‌ರಾಮ್ ಅಣ್ಣ ತಮ್ಮಂದಿರಾಗಿದ್ದು, ಚೆಸ್ ಲೋಕದ ಬಾಲ ಪ್ರತಿಭೆಗಳಾಗಿದ್ದಾರೆ. ಇದುವರೆಗೆ ಹಲವಾರು ರಾಜ್ಯ, ಅಂತರ್ ರಾಜ್ಯ, ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಸ್ಪರ್ಧಿಸಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. 5ನೇ ತರಗತಿಯಲ್ಲಿ ಕಲಿಯುತ್ತಿರುವ ದೀನ್‌ರಾಮ್, 7ನೇ ತರಗತಿಯಲ್ಲಿ ಕಲಿಯುತ್ತಿರುವ ಧ್ಯಾನ್‌ಕೃಷ್ಣ ಜೂನ್‌ನಲ್ಲಿ ದೆಹಲಿಯಲ್ಲಿ ನಡೆದ ಕಾಮನ್‌ವೆಲ್ತ್ ಚೆಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ವಕೀಲ ದಂಪತಿ ಚೇತಾನಾ ಹಾಗೂ ರಾಮಚಂದ್ರ ಶೆಟ್ಟಿ ದಂಡೆ ಇವರ ಪುತ್ರರಾಗಿದ್ದಾರೆ.
ಸಮಗ್ರ ಪ್ರಶಸ್ತಿಗೆ ಕಾರಣರಾದ ಇನ್ನೊಂದು ಸಹೋದರಿ ಜೋಡಿ ರಿಯೋನಾ ಪಿಂಟೋ ಹಾಗೂ ರಿಶೋನಾ ಪಿಂಟೋ. 4ನೇ ತರಗತಿಯ ರಿಶೋನಾ ಪಿಂಟೋ ಮತ್ತು 7ನೇ ತರಗತಿಯ ರಿಯೋನಾ ಪಿಂಟೋ ಕೂಡಾ ಹಲವಾರು ಚೆಸ್ ಪಂದ್ಯಾವಳಿಗಳಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟಗಳಲ್ಲಿ ಪ್ರದರ್ಶನ ನೀಡಿ ಸಾಧನೆ ಮೆರೆದಿದ್ದಾರೆ. ಇವರು ಶಿಕ್ಷಕ ದಂಪತಿ ರೋಶನ್ ಅಲೆಗ್ಸಾಂಡರ್ ಪಿಂಟೋ ಮತ್ತು ಶಾಲೆಟ್ ಪಿಂಟೋರವರ ಪುತ್ರಿಯರು.
www.bantwalnews.com Editor: Harish Mambady