ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ ಶಿಕ್ಷಣ ಸಂಪನ್ಮೂಲ ಕೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2019 (ಕರಡು) ಕುರಿತು ಗುರುವಾರ ಬಂಟ್ವಾಳ ಬಿಇಒ ಕಚೇರಿಯ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಪಡಿ ನಿರ್ದೇಶಕ ರೆನ್ನಿ ಡಿಸೋಜ ಅವರು, ಶಿಕ್ಷಣ ನೀತಿ ಕುರಿತು ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಅವಶ್ಯಕತೆ, ಪ್ರಮುಖ ಪಾತ್ರ, ಶಿಕ್ಷಕರ ಸಹಭಾಗಿತ್ವ ವಿಚಾರದ ಬಗ್ಗೆ ಮಾಹಿತಿ ನೀಡಿದರು.
ಶಾಲಾ ಶಿಕ್ಷಣ, ಶಿಕ್ಷಕರ ಶಿಕ್ಷಣ ಮತ್ತು ತರಬೇತಿ, ಪ್ರಾರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಬಲಪಡಿಸುವಿಕೆ, ಎಲ್ಲಾ ಮಕ್ಕಳಲ್ಲೂ ಸಾರಕ್ಷತೆ ಮತ್ತು ಗಣಿತ ಕೌಶಲಗಳ ಭದ್ರ ಬುನಾದಿ ರೂಪಿಸುವಿಕೆ, ಶಿಕ್ಷಣದ ಎಲ್ಲಾ ಮಟ್ಟದಲ್ಲೂ ಸಾರ್ವತ್ರಿಕ ಪ್ರವೇಶ ಮತ್ತು ಧಾರಣತೆಯನ್ನು ಕಾಪಾಡುವಿಕೆ, ಶಾಲಾ ಶಿಕ್ಷಣಕ್ಕಾಗಿ ಹೊಸ ಪಠ್ಯಕ್ರಮ ಮತ್ತು ಬೋಧನಾ ಕ್ರಮ ಮತ್ತಿತರ ಪ್ರಮುಖ ಅಂಶಗಳ ಕುರಿತು ಚರ್ಚಿಸಲಾಯಿತು.
ಸಮೂಹ ಸಂಪನ್ಮೂಲ ಕೇಂದ್ರದ ಮುಖ್ಯಸ್ಥರು, ಕ್ಲಸ್ಟರ್ ಮುಖ್ಯಸ್ಥರು, ಶಾಲಾ ಮುಖ್ಯಶಿಕ್ಷಕರು ಹಾಗೂ ಆಯ್ದ ಶಿಕ್ಷಕರು ಸಂವಾದದಲ್ಲಿ ಭಾಗವಹಿಸಿದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಧಾಕೃಷ್ಣ ಭಟ್, ಪಂಚಾಯತ್ ರಾಜ್ ತರಬೇತಿದಾರ ಮಂಜು ವಿಟ್ಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಫಾರೂಕ್ ಬಂಟ್ವಾಳ ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್ ವಂದಿಸಿದರು.