ಬಂಟ್ವಾಳ

ತ್ಯಾಜ್ಯ ಸಂಗ್ರಹಕ್ಕೆ ಬೇಡ ಅಡ್ವಾನ್ಸ್ ಶುಲ್ಕ: ಬಂಟ್ವಾಳ ಪುರಸಭೆ ಮುಂಭಾಗ ಪ್ರತಿಭಟನೆ

ಕಸ ಸಂಗ್ರಹಣೆಗೆ ಅಡ್ವಾನ್ಸ್ ಶುಲ್ಕ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ಒತ್ತಾಯಿಸಿ ಬಂಟ್ವಾಳದ ಸಾರ್ವಜನಿಕರು ಸಮಾನ ಮನಸ್ಕ ಸಂಘಟನೆಯಡಿಯಲ್ಲಿ ಪುರಸಭೆ ಮುಂಭಾಗ ಮಂಗಳವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು.

ಬಂಟ್ವಾಳ ಪುರಸಭಾ ಆಡಳಿತವು ತ್ಯಾಜ್ಯ ವಿಲೇವಾರಿಗೆ ಸಾರ್ವತ್ರಿಕವಾಗಿ ಕಸ ಸಂಗ್ರಹಣಾ ಶುಲ್ಕವನ್ನು ವಿಧಿಸುವುದನ್ನು ನಿಲ್ಲಿಸಬೇಕು ಎಂದು ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪುರಸಭೆ ಮುಖ್ಯಾಧಿಕಾರಿ ಮೂಲಕ ಮನವಿ ಮಾಡಿದ ಪ್ರತಿಭಟನಾಕಾರರು, ವಾರದೊಳಗೆ ಇತ್ಯರ್ಥ ಮಾಡದೇ ಇದ್ದರೆ, ಉಪವಾಸ ಸತ್ಯಾಗ್ರಹದಂಥ ಕಠಿಣ ಹೋರಾಟ ನಡೆಸುವ ಹಾಗೂ ಜಿಲ್ಲಾಧಿಕಾರಿ ಬರುವವರೆಗೂ ರಸ್ತೆ ತಡೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭ ಮಾತನಾಡಿದ ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಸೂಚನೆಯಂತೆ ವಾಣಿಜ್ಯ ಮತ್ತಿತರ ತ್ಯಾಜ್ಯ ಶುಲ್ಕ ದರವನ್ನು ಕಡಿಮೆಗೊಳಿಸಿದ್ದಾಗಿ ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆ ನೀಡಿದ್ದಾರೆ. ಶಾಸಕರು ತ್ಯಾಜ್ಯ ಸಂಗ್ರಹದ ಮುಂಗಡ ಶುಲ್ಕ ವಸೂಲಾತಿಯನ್ನೇ ನಿಲ್ಲಿಸಬೇಕು, ಇದೇ ವಿಷಯಕ್ಕೆ ಸಂಬಂಧಿಸಿ ಸಭೆ ಕರೆಯಬೇಕು, ದರ ಕಡಿಮೆ ಮಾಡಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಆಗ್ರಹಿಸಿದರು.

ಪುರಸಭಾ ಸದಸ್ಯರೂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರೂ ಆಗಿರುವ ಬಿ.ವಾಸು ಪೂಜಾರಿ ಮಾತನಾಡಿ, ಹಿಂದಿನ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲಿ ಅಡ್ವಾನ್ಸ್ ತ್ಯಾಜ್ಯ ಶುಲ್ಕ ಸಂಗ್ರಹವನ್ನು ವಿರೋಧಿಸಿದ್ದೆವು. ಆದರೆ ಈಗ ಅದನ್ನು ಜಾರಿಮಾಡಿದ್ದು, ಬಡವರಿಗೆ ಇದರಿಂದ ತೊಂದರೆ ಆಗುತ್ತಿದೆ ಎಂದರು.

ಸಮಾನ ಮನಸ್ಕ ಸಂಘಟನೆಯ ಸಂಚಾಲಕ ಬಿ.ಶೇಖರ್, ಉಪಸಂಚಾಲಕ ಪ್ರಭಾಕರ ದೈವಗುಡ್ಡೆ, ರಾಮಣ್ಣ ವಿಟ್ಲ ಮಾತನಾಡಿದರು. ಪುರಸಭೆ ಸದಸ್ಯರಾದ ಮಾಜಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಮಹಮ್ಮದ್ ಶರೀಫ್, ಮುನೀಶ್ ಆಲಿ, ಇದ್ರೀಸ್, ಗಂಗಾಧರ ಪೂಜಾರಿ, ವಿವಿಧ ಪಕ್ಷ, ಸಂಘಟನೆಗಳ ಪ್ರಮುಖರಾದ ಹಾರೂನ್ ರಶೀದ್, ಉದಯಕುಮಾರ್, ಸಾದಿಕ್ ಬಡ್ಡಕಟ್ಟೆ, ಸುರೇಶ್ ಕುಮಾರ್ ಹಾಗೂ ಬಂಟ್ವಾಳ, ಬಿ.ಸಿ.ರೋಡ್ ಪರಿಸರದ ವರ್ತಕರು, ನಾಗರಿಕರು ಉಪಸ್ಥಿತರಿದ್ದರು. ಬಳಿಕ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರಿಗೆ ಮನವಿ ಅರ್ಪಿಸಿದ ಪ್ರತಿಭಟನಾಕಾರರು, ಕೂಡಲೇ ಅಡ್ವಾನ್ಸ್ ತೆರಿಗೆಯ ವ್ಯವಸ್ಥೆ ಕೈಬಿಡುವಂತೆ ಒತ್ತಾಯಿಸಿದರು.

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ