ಶಾಸಕ ರಾಜೇಶ್ ನಾಯ್ಕ್ ಸೂಚನೆಯಂತೆ ಕ್ರಮ – ಪುರಸಭೆ
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಸೂಚನೆಯಂತೆ ಪುರಸಭೆಯ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ವಾಣಿಜ್ಯ ಕೈಗಾರಿಕೆ ಮತ್ತು ಮಳಿಗೆಗಳಿಗೆ ಸಂಬಂಧಿಸಿ ಇಳಿಕೆ ಮಾಡಲಾಗಿದೆ ಎಂದು ಪುರಸಭೆ ಪ್ರಕಟಣೆ ನೀಡಿದೆ.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿ ಏ.1ರಿಂದ ಶುಲ್ಕವನ್ನು ವಸೂಲು ಮಾಡಲಾಗುತ್ತಿದ್ದು, ಈ ಸಂಬಂಧ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ತ್ಯಾಜ್ಯ ಸಂಗ್ರಹಣಾ ಶುಲ್ಕ ಅತ್ಯಧಿಕವಾಗಿದೆ, ಇದನ್ನು ಕಡಿಮೆ ಮಾಡಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮನವಿ ಮಾಡಿದ್ದರು. ಈ ಸಂಬಂಧ ಜುಲೈ 2ರಂದು ಪುರಸಭಾ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರಿಗೆ ಹೊರೆಯಾಗುತ್ತಿರುವ ವಾಣಿಜ್ಯ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಕಡಿತಗೊಳಿಸಲು ಮಂಗಳೂರು ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದ್ದರು. ಅದರಂತೆ ಬಂಟ್ವಾಳ ಪುರಸಭೆ ಜುಲೈ 20ರಂದು ವಾಣಿಜ್ಯ, ಕೈಗಾರಿಕೆ, ಮಳಿಗೆಗಳ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಡಿಪಿಆರ್ ದರಗಳಿಂತ ಕಡಿಮೆ ಮಾಡಿ ಪರಿಷ್ಕರಿಸಿದೆ ಎಂದು ಮುಖ್ಯಾಧಿಕಾರಿ ರೇಖಾ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸ್ವಾಗತ: ವಾಣಿಜ್ಯ ಉದ್ದೇಶದ ಕಟ್ಟಡಗಳ ತ್ಯಾಜ್ಯ ಸಂಗ್ರಹಣ ಶುಲ್ಕ ಅತಿಯಾಗಿದ್ದು ಅದನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುವಂತೆ ಶಾಸಕ ರಾಜೇಶ್ ನಾಯ್ಕ್ ಸೂಚಿಸಿದ್ದು, ಇದರ ಪರಿಣಾಮವಾಗಿ ವಾಣಿಜ್ಯ ಉದ್ದೇಶದ ಕಟ್ಟಡಗಳ ತ್ಯಾಜ್ಯ ಸಂಗ್ರಹಣ ಶುಲ್ಕವನ್ನು ಇದೀಗ ಪರಿಷ್ಕರಿಸಲಾಗಿದೆ. ಅಧಿಕಾರಿಗಳ ಕ್ರಮವನ್ನು ಬಂಟ್ವಾಳ ಕ್ಷೇತ್ರ ಬಿಜೆಪಿಯ ಸ್ವಾಗತಿಸುತ್ತಿದೆ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ತಿಳಿಸಿದ್ದಾರೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೆಲವೊಂದು ಪ್ರದೇಶಗಳಲ್ಲಿ ತ್ಯಾಜ್ಯ ಸಂಗ್ರಹ ವ್ಯವಸ್ಥೆ ಇಲ್ಲದಿದ್ದು ಅಂತಹ ಪ್ರದೇಶಗಳ ಜನರು ವ್ಯವಸ್ಥೆ ಇಲ್ಲದಿದ್ದರೂ ಕಟ್ಟಡ ತೆರಿಗೆ ಪಾವತಿಯ ಜತೆ ತ್ಯಾಜ್ಯ ಸಂಗ್ರಹ ಶುಲ್ಕ ಪಾವತಿಸಬೇಕಾಗಿದೆ. ಈ ಬಗ್ಗೆಯೂ ಅಧಿಕಾರಿ ವರ್ಗ ಗಮನಹರಿಸ ಬೇಕಾಗಿ ಅವರು ವಿನಂತಿಸಿದ್ದಾರೆ.