ಮಂಗಳೂರಲ್ಲಿ ಅಧಿಕ ಪ್ರಕರಣ, ಜಿಲ್ಲೆಯ ಇತರೆಡೆಯೂ ಇವೆ ಶಂಕಿತ ಡೆಂಗ್ಯೂ
ಮಂಗಳೂರು: ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಈಗಾಗಲೇ ಶಾಲಾ ಮಕ್ಕಳಿಬ್ಬರು ತೀವ್ರ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಭಾನುವಾರ ತಡರಾತ್ರಿ ಬಿಟಿವಿ ಚಾನೆಲ್ ನ ವಿಡಿಯೋ ಜರ್ನಲಿಸ್ಟ್ ನಾಗೇಶ್ ಪಡು (35) ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಪತ್ನಿ, ಮಗು ಹಾಗೂ ಅಪಾರ ಬಂಧುಮಿತ್ರರನ್ನು ಅವರು ಅಗಲಿದ್ದಾರೆ. ಮೃದು ಸ್ವಭಾವ, ಮಿತಭಾಷಿಯಾಗಿದ್ದ ಯುವಪತ್ರಕರ್ತ ನಾಗೇಶ್ ಕೆಲ ದಿನಗಳ ಹಿಂದೆ ಜ್ವರಬಾಧಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾಋ ಶಂಕಿತ 26 ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಮೂರು ಪ್ರಕರಣ ದೃಢಪಟ್ಟಿವೆ. ಉಳಿದಂತೆ 23 ಪ್ರಕರಣಗಳ ವರದಿಗಳು ಇನ್ನಷ್ಟೇ ಬರಬೇಕಾಗಿದೆ. ಇದರಲ್ಲಿ ಮಂಗಳೂರಿನಲ್ಲಿ ಗರಿಷ್ಠ 21 ಪ್ರಕರಣಗಳು ಇವೆ.
ಡೆಂಗ್ಯೂ ರೋಗ ನಿಯಂತ್ರಣ ಅಂಗವಾಗಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಮಹಾನಗರಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ತೀವ್ರ ಪರಿಶೀಲನೆ, ತಪಾಸಣಾ ಚಟುವಟಿಕೆ ನಡೆಸಲಾಯಿತು.
ನೀರು ನಿಂತು ಸೊಳ್ಳೆ ಉತ್ಪತ್ತಿಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಿ ವಸೂಲು ಮಾಡುವಂತೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಈಗಾಗಲೇ ಸೂಚನೆ ನೀಡಿದ್ದಾರೆ.
ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ- ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಮಂಗಳೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ರವಿವಾರ ಸ್ವಚ್ಛತೆ ಕಾಪಾಡಿ ಕೊಳ್ಳದ ವಿವಿಧ ಖಾಸಗಿ ಕಟ್ಟಡ ಸೇರಿದಂತೆ ಇತರ ಕಟ್ಟಡಗಳ ಮಾಲಕರಿಗೆ ಸ್ಥಳದಲ್ಲೇ 85, 000 ರೂ. ದಂಡ ವಿಧಿಸಲಾಗಿದೆ.