ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಭಾರತ ಶಿಕ್ಷಣ ಯಾತ್ರೆ, ದೆಹಲಿ ಚಲೋ ಆಂದೊಲನಕ್ಕೆ ಭಾನುವಾರ ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಿ ಕ್ಷೇತ್ರದಲ್ಲಿ ಅದ್ದೂರಿಯ ಚಾಲನೆ ಸಿಕ್ಕಿತು.
ವಿಧಾನ ಪರಿಷತ್ ನ ಮಾಜಿ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದರು.
ಇದಕ್ಕಿಂತಲೂ ಮೊದಲು ಪೊಳಲಿಯ ಸರ್ವಮಂಗಳಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಈ ದೇಶ ಒಂದು, ಇಲ್ಲಿಯ ಮಕ್ಕಳು ಒಂದೇ, ಆ ಮಕ್ಕಳಿಗೆ ಒಂದೇ ರೀತಿಯ ಶಿಕ್ಷಣ ಸಿಗಬೇಕು ಎನ್ನುವುದು ಒಳ್ಳೆಯ ಚಿಂತನೆ ಎಂದರು.
ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆ ವಹಿಸಿ ಮಾತನಾಡಿ
ನಾನು, ನನ್ನ ಮನೆ, ನನ್ನ ಮಕ್ಕಳು ಎಂದರೆ ದೇಶ ಅಭಿವೃದ್ದಿಯಾಗುವುದಿಲ್ಲ, ಎಲ್ಲ ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ದೇಶ ಅಭಿವೃದ್ದಿಯ ಪಥದಲ್ಲಿ ಸಾಗಲು ಸಾಧ್ಯವಿದೆ ಎಂದರು.
ಸಮಿತಿಯ ಉಪಾಧ್ಯಕ್ಷ, ನ್ಯಾಯವಾದಿ ಮಯೂರ್ ಕೀರ್ತಿ ಮಾತನಾಡಿ ಶಿಕ್ಷಣ ವಂತನೇ ಶ್ರೀಮಂತ, ವಿದ್ಯಾಭ್ಯಾಸ ಇಲ್ಲದವ ಬಡವ ಎನ್ನುವ ಕಾಲ ಬರಲಿದೆ. ಮೂಲಭೂತ ಹಕ್ಕಾದ ಶಿಕ್ಷಣವನ್ನು ಪಡೆಯಲು ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸ ಎಂದರು.
ವೇದಿಕೆಯಲ್ಲಿ ಚಿಕ್ಕಬಳ್ಳಾಪುರ ಜಿ.ಪಂ.ಸದಸ್ಯ ಪ್ರಕಾಶ್ , ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ, ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ, ತಾ.ಪಂ.ಸದಸ್ಯ ಯಶವಂತ ಪೊಳಲಿ, ಮಾಜಿ ಸದಸ್ಯ ವೆಂಕಟೇಶ್ ನಾವಾಡ, ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಜೇಸಿಐ ಬಂಟ್ವಾಳದ ಅಧ್ಯಕ್ಷ ಯತೀಶ್ ಕರ್ಕೆರಾ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು, ಕೇಲ್ದೋಡಿ ಕ್ಷೇತ್ರದ ಕೋಟಿ ಪೂಜಾರಿ, ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಶಾಲೆಯ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ಮುಖ್ಯ ಶಿಕ್ಷಕ ಮೌರೀಶ್ ಡಿಸೋಜಾ, ಹಿಂದೂ ಯುವ ಶಕ್ತಿ ಆಲಡ್ಕದ ಅಧ್ಯಕ್ಷ ಸಂತೋಷ್ ಕಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಕಾರ್ಯದರ್ಶಿ ಪುರುಷೋತ್ತಮ ಅಂಚನ್ ಸ್ವಾಗತಿಸಿ, ಪ್ರಸ್ತಾವಿಸಿದರು. ಶಿಕ್ಷಕರಾದ ಹಿಲ್ಡಾ ಫೆರ್ನಾಂಡೀಸ್ ಹಾಗೂ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಥಯಾತ್ರೆಯ ಅಂಗವಾಗಿ ಬೆಳಿಗ್ಗೆ ಶ್ರೀ ರಾಜರಾಜೇಶ್ವರಿ ಅಮ್ಮನವರಿಗೆ ವಿಶೇಷ ಅಲಂಕಾರ ಪೂಜೆ ಸಲ್ಲಿಸಲಾಯಿತು. ಅಪರಾ ಸಂಖ್ಯೆಯಲ್ಲಿ ಶಿಕ್ಷಣಾಭಿಮಾನಿಗಳು ಭಾಗವಹಿಸಿದರು.