ಜನರ ಜೇಬಿನಿಂದ ಸಂಗ್ರಹವಾದ ದುಡ್ಡು ಪೋಲಾಗುತ್ತದೆ ಎಂದು ಸ್ವತಃ ಜನರಿಗೆ ಗೊತ್ತಾಗುವವರೆಗೂ ಇಂಥದ್ದು ಮತ್ತಷ್ಟು ಕಾಣಸಿಗುತ್ತವೆ.
www.bantwalnews.com Editor: ಹರೀಶ ಮಾಂಬಾಡಿ
ಈ ಬಸ್ ನಿಲ್ದಾಣ ಉಪಯೋಗಕ್ಕಿಲ್ಲ ಎಂಬುದು ಮರಕ್ಕೂ ಗೊತ್ತಾಗಿದೆಯೋ ಏನೋ, ಮೊನ್ನೆ ಶುಕ್ರವಾರ ಸುರಿದ ಭಾರಿ ಮಳೆಗೆ ಬಂಟ್ವಾಳದ ಕೊಟ್ರಮನಗಂಡಿ ಬಸ್ ಪ್ರಯಾಣಿಕರ ನಿಲ್ದಾಣದ ಮೇಲೆ ಮರವೊಂದು ವಾಲಿ ನಿಂತಿದೆ. ಮೊನಿರ್ಮಾಣವಾಗಿ ದಶಕದ ಬಳಿಕವೂ ಇಲ್ಲಿ ವಿಶಾಲವಾದ ಜಾಗದಲ್ಲಿ ಬಸ್ ನಿಲ್ಲಲು, ಪ್ರಯಾಣಿಕರು ಬರುವಂತೆ ಮಾಡಲು ಮೊದಲೇ ಆಡಳಿತ ಮನಸ್ಸು ಮಾಡುತ್ತಿಲ್ಲ. ಇನ್ನು ಅಪಾಯದ ಸ್ಥಿತಿ ನಿರ್ಮಾಣವಾದ ಮೇಲೆ ಕೇಳುವುದೇ ಬೇಡ.
ಇನ್ನು ಯಾರಾದರೂ ಬಂಟ್ವಾಳದ ಕೊಟ್ರಮನಗಂಡಿ ಬಸ್ ನಿಲ್ದಾಣಕ್ಕೆ ಬಸ್ಸುಗಳು ನಿಲ್ಲುವಂತೆ ಮಾಡಿ ಎಂದು ಕೋರಿದರೆ, ಸಿದ್ಧ ಉತ್ರರ ಲಭ್ಯವಾಗುತ್ತದೆ. ಅದೇನೆಂದರೆ, ‘ಅಲ್ಲಿ ಮರ ಬಿದ್ದಿದೆಯಲ್ಲಾ, ಈಗ ಅಲ್ಲಿಗೆ ಪ್ರಯಾಣಿಕರು ಹೋಗಿ ನಿಲ್ಲುವುದು ಅಪಾಯಕಾರಿ, ಸರಿಯಾದ ಮೇಲೆ ಮತ್ತೆ ನೋಡೋಣ,’
ಹೀಗೆ ಬಸ್ ನಿಲ್ದಾಣ ಕಟ್ಟಿ ಯಾವಾಗ ಅಲ್ಲಿ ಬಸ್ ನಿಲ್ಲುತ್ತದೆ ಎಂದು ಕೇಳಿದವರಿಗೆಲ್ಲಾ ಸಂಬಂಧಪಟ್ಟ ಆಡಳಿತದವರು ನೆಪ ಹೇಳುತ್ತಾ ಉತ್ತರ ಕೊಟ್ಟು ಕೊಟ್ಟು ದಶಮಾನೋತ್ಸವ ಆಗಿ ಹೋಯಿತು. ಇಂದಿಗೂ ಬಸ್ಸುಗಳು ಬಂಟ್ವಾಳದ ಅಗಲಕಿರಿದಾದ, ಒಂದು ವಾಹನ ಬಂದರೆ ಮತ್ತೊಂದು ವಾಹನ ಹೋಗಲು ಕಷ್ಟಪಡಬೇಕಾದ ಜಾಗದಲ್ಲಿ ನಿಲ್ಲುತ್ತವೆ. ಪ್ರಯಾಣಿಕರು ಅಲ್ಲಿಯೇ ಬರುತ್ತಾರೆ, ಇಂಥ ಸಮಸ್ಯೆಗಳನ್ನು ನೋಡಿಯೇ ದಶಕದ ಹಿಂದೆ ಈ ಜಾಗದಲ್ಲಿ ಬಸ್ ನಿಲ್ದಾಣವನ್ನು ರಚಿಸಲಾಗಿತ್ತು. ಅಂದ ಹಾಗೆ ಬಂಟ್ವಾಳದಲ್ಲಿ ಎದುರು ವಿಶಾಲವಾದ ಜಾಗ, ಹಿಂದೆ ಬಸ್ ನಿಲ್ದಾಣ ಇರುವ ಸ್ಥಿತಿ ಎರಡು ಕಡೆ ಇದೆ. ಒಂದು ಬಡ್ಡಕಟ್ಟೆ, ಮತ್ತೊಂದು ಕೊಟ್ರಮನಗಂಡಿ.
ಬಡ್ಡಕಟ್ಟೆಯಲ್ಲಿ ಬಸ್ ನಿಲ್ದಾಣದ ಸ್ಥಿತಿ ಅಧೋಗತಿಗೆ ಇಳಿದಿದ್ದನ್ನು ಮನಗಂಡು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ರೋಟರಿ ಕ್ಲಬ್ ಬಂಟ್ವಾಳ, ಜೇಸಿ ಬಂಟ್ವಾಳ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಇಡೀ ಬಸ್ ನಿಲ್ದಾಣವನ್ನು ಮನುಷ್ಯರು ಕುಳಿತುಕೊಳ್ಳುವಂತೆ ಮಾಡಿ, ಶಾಸಕ ರಾಜೇಶ್ ನಾಯ್ಕ್ ಅವರು ಗಾಂಧಿ ಜಯಂತಿ ದಿನ ಅಲ್ಲಿ ನವೀಕೃತ ವ್ಯವಸ್ಥೆಯನ್ನು ಜನರಿಗೆ ಲೋಕಾರ್ಪಣೆ ಮಾಡಿದ್ದರು. ಈಗಲೂ ಅಲ್ಲಿ ಬಸ್ ಗಳು ಒಳಪ್ರವೇಶಿಸಲು ಹಿಂದೆ ಮುಂದೆ ನೋಡುವುದು, ಬಸ್ ನಿಲ್ಲಬೇಕಾದ ಜಾಗ ಪಾರ್ಕಿಂಗ್ ಜಾಗವಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಇದೇ ರೀತಿಯ ಸ್ಥಿತಿ ಕೊಟ್ರಮನಗಂಡಿಯಲ್ಲಿದೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಸ್ ತಂಗುದಾಣದ ಹಿಂಬದಿಯಲ್ಲಿ ನೀರುಹರಿಯುವ ತೋಡಿನಲ್ಲಿ ಬೆಳೆದ ಬೃಹತ್ ಗಾತ್ರದ ಮರ ಬಸ್ ತಂಗುದಾಣದ ಮೇಲೆಯೇ ಎರಗಿ ನಿಂತಿದೆ. ಪರಿಣಾಮ ಬಸ್ ತಂಗುದಾಣಕ್ಕೆ ಯಾವುದೇ ಹಾನಿಯಾಗದಿದ್ದರೂ,ಮರದ ಕೊಂಬೆ ತಂಗುದಾಣವನ್ನು ಅವರಿಸಿ ನಿಂತಿದೆ. ಪಕ್ಕದ ಆಟಕ್ಕುಂಟು ಲೆಕ್ಕಕ್ಕಿಲದಂತಿರುವ ಸಾರ್ವಜನಿಕ ಶೌಚಾಲಯ ಕೂಡ ಮರದ ಗೆಲ್ಲಿನಿಂದಾಗಿ ಮರೆಯಾಗಿದೆ. ತಂಗುದಾಣದ ಪಕ್ಕದಲ್ಲೇ ಹೆಸರಾಂತ ಕಂಪೆನಿಯೊಂದು ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿಕೊಟ್ಟಿದ್ದು,ಅದು ಕೂಡ ಉದ್ಘಾಟನೆಯಾದರೂ, ಇದುವರೆಗೂ ಜನರ ಉಪಯೋಗಕ್ಕೆ ಸಿಗಲಿಲ್ಲ. ಸದ್ಯ ಈ ಬಸ್ ತಂಗುದಾಣ ಬಿಕ್ಷುಕರ ತಾಣ. ಈವರೆಗೂ ಒಂದೇ ಒಂದು ಬಾರಿ ಬಸ್ ಗಳು ಈ ತಂಗುದಾಣವನ್ನು ಪ್ರವೇಶಿಸಿಲ್ಲ. ಈಗ ಬಸ್ ಗಳು ನಿಲುಗಡೆಯಾಗುವ ಸ್ಥಳದಲ್ಲಿ ಈಗಲೂ ಪ್ರತಿನಿತ್ಯ ಟ್ರಾಫಿಕ್ ಜಾಮ್ ಆಗುತ್ತಲೇ ಇದೆ.
ಪುರಸಭೆಯ ಸಾಮಾನ್ಯಸಭೆಗಳಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಕೂರಿಸಿ ಬಸ್ ತಂಗುದಾಣಕ್ಕೆ ಬಸ್ ನ್ನು ಪ್ರವೇಶಿಸುವ ದೆಸೆಯಲ್ಲಿ ಸಾಕಷ್ಟು ಚರ್ಚೆ ನಡೆದಿದ್ದರೂ, ಬಸ್ ಗಳು ಮಾತ್ರ ಈ ತಂಗುದಾಣದೊಳಗೆ ಪ್ರವೇಶ ಪಡೆದಿಲ್ಲ. ಖರ್ಚಾದದ್ದು ಮೀಟಿಂಗ್ ವೆಚ್ಚ, ಅಲ್ಲಿ ವಿತರಣೆಯಾದ ಚಹ ಮತ್ತು ಕರಿದ ತಿಂಡಿತಿನಸುಗಳು.