ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸಹಯೋಗದೊಂದಿಗೆ ಹಸಿರು ಕರ್ನಾಟಕ ಯೋಜನೆಯಡಿ ಇಲ್ಲಿನ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಬಂಟ್ವಾಳ ವಲಯ ಅರಣ್ಯಧಿಕಾರಿ ಬಿ. ಸುರೇಶ್ ಮಾತನಾಡಿ ಓಝೋನ್ ಪದರದ ಕರಗುವಿಕೆಗೆ, ನೀರಿನ ಅಭಾವಕ್ಕೆ, ಸ್ವಚ್ಛ ಗಾಳಿಯ ಕೊರತೆಗೆ ಪರಿಸರ ಮಾಲಿನ್ಯ ಕಾರಣವಾಗಿದೆ. ಆಧುನಿಕತೆ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ಇಂದು ಪರಿಸರ ನಾಶವಾಗುತ್ತಿದೆ. ವಿದ್ಯಾರ್ಥಿಗಳು ಪರಿಸರ ಕಾಳಜಿ ತೋರಿ ಪರಿಸರ ಉಳಿಸುವ ಪ್ರಯತ್ನ ಮಾಡಬೇಕು. ಹುಟ್ಟುಹಬ್ಬದಂತಹ ವಿಜೃಂಭಣೆಗೆ ಕಡಿವಾಣ ಹಾಕಿ ಖಾಲಿ ಜಾಗದಲ್ಲಿ ಗಿಡಗಳನ್ನು ನೆಡುವಂತಹ ಸೃಜನಾತ್ಮಕ ಕೆಲಸವಾಗಬೇಕು ಎಂದರು.
ಶಾಲಾ ಪ್ರಾಂಶುಪಾಲೆ ರಮಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಅನಿಲ್, ಸ್ಮಿತಾ, ಅನಿತಾ ಭಾಗವಹಿಸಿದ್ದರು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಸದಸ್ಯ ಜಗನ್ನಾಥ್ ರೈ ಉಪಸ್ಥಿತರಿದ್ದರು. ಮುಂಜಾನೆಯ ಶಾಲಾ ಸಭೆಯಲ್ಲಿ ಇಕೋ ಕ್ಲಬ್ ವಿದ್ಯಾರ್ಥಿಗಳಿಂದ ಪರಿಸರ ಸಂಬಂಧಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಅರಣ್ಯ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಮರಗಳ ಉಳಿವಿನ ಅನಿವಾರ್ಯತೆ, ಜಲ ಸಂರಕ್ಷಣೆಯ ಅನಿವಾರ್ಯತೆ, ನದಿಗಳ ಪ್ರಾಮುಖ್ಯತೆ, ಪರಿಸರ ನೈರ್ಮಲ್ಯದ ಮಹತ್ವದ ಕುರಿತಾದ ವಿವಿಧ ರೀತಿಯ ಪ್ರಹಸನ, ಗಾಯನ, ಭಿತ್ತಿ ಪತ್ರ ಪ್ರದರ್ಶನ, ನೃತ್ಯಗಳನ್ನು ಪ್ರಸ್ತುತ ಪಡಿಸಿದರು. ರಾಜ್ಯ ಪುರಸ್ಕೃತ ಗೈಡ್ಸ ವಿದ್ಯಾರ್ಥಿನಿಯರಾದ ಶ್ರೀಯಾ ಜೈನ್ ಮತ್ತು ಆತ್ಮಿ ಶೆಟ್ಟಿ ನಿರೂಪಿಸಿದರು. ಸ್ಕೌಟ್ಸ್ ಶಿಕ್ಷಕ ಹರೀಶ್ ಆಚಾರ್ಯ, ಗೈಡ್ಸ್ ಶಿಕ್ಷಕಿಯರಾದ ಕೇಶವತಿ ಹಾಗೂ ಜೂಲಿ ಟಿ.ಜೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಬಳಿಕ ಅರಣ್ಯ ಇಲಾಖಾ ಅಧಿಕಾರಿಗಳು, ಪ್ರಾಂಶುಪಾಲರು, ಇಕೋ ಕ್ಲಬ್ ಸದಸ್ಯರು, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯ ನಡೆಯಿತು.