ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ಜಂಕ್ಷನ್ ಬಳಿ ಐಸ್ ಕ್ರೀಂ ಸಾಗಾಟದ ವಾಹನವೊಂದರಲ್ಲಿ ಹಸುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ವಿಟ್ಲ ಪೊಲೀಸರು ಬುಧವಾರ ಪತ್ತೆಹಚ್ಚಿದ್ದಾರೆ.
ಹಳದಿ ಮತ್ತು ನೀಲಿ ಬಣ್ಣದ ಐಸ್ ಕ್ರೀಂ ಬ್ರಾಂಡ್ ಒಂದರ ಹೆಸರು ಬರೆದಿರುವ ವಾಹನವನ್ನು ಪಿಎಸ್ ಐ ಯಲ್ಲಪ್ಪ ಎಸ್ ಮತ್ತು ಸಿಬ್ಬಂದಿ ಇಲಾಖಾ ಜೀಪಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕೊಳ್ನಾಡು ಗ್ರಾಮದ ಸಾಲೆತ್ತೂರು ಜಂಕ್ಷನ್ ಬಳಿ ಇಂದು ಬೆಳಗ್ಗೆ ಗಮನಿಸಿ, ನಿಲ್ಲಿಸಲು ಸೂಚಿಸಿದಾಗ ಚಾಲಕನು ಒಮ್ಮೇಲೇ ವಾಹನವನ್ನು ಮುಂದಕ್ಕೆ ಚಲಾಯಿಸಿದ. ಕೊಳ್ನಾಡು ಗ್ರಾಮದ ಕಟ್ಟತ್ತಿಲ ಗೋಪಾಲಕೃಷ್ಣ ಮಠ ಎಂಬಲ್ಲಿ ವಾಹನವನ್ನು ನಿಲ್ಲಿಸಿದಾಗ, ಚಾಲಕ ಮತ್ತು ಇನ್ನೋರ್ವ ಪರಾರಿಯಾಗಿದ್ದು, ವಾಹನದ ಹಿಂಭಾಗದ ಬಾಗಿಲನ್ನು ತೆರೆದು ನೋಡಲಾಗಿ ಕಂದು ಬಣ್ಣದ ಎರಡು ಹಸುಗಳು ಮತ್ತು ಕಪ್ಪು ಬಣ್ಣದ ಗಂಡು ಕರುವನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಕಂಡು ಬಂದಿದೆ. ಆರೋಪಿಗಳು ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಹಾಕಿ ವಧೆ ಮಾಡಿ ಮಾಂಸ ಮಾಡುವ ಸಲುವಾಗಿ ಐಸ್ ಕ್ರಿಂ ವಾಹನದಲ್ಲಿ ಕೇರಳ ಕಡೆಗೆ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.