ಸರ್ಕಾರಿ ಕಚೇರಿ

ಡೆಂಗ್ಯೂ ಕುರಿತು ಕಟ್ಟೆಚ್ಚರ, ಮನೆ ಮನೆ ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

ಮಳೆ, ಬಿಸಿಲಿನ ಪ್ರದರ್ಶನವೀಗ ಡೆಂಗೆ ಉಪಟಳಕ್ಕೆ ಕಾರಣವಾಗಿದೆ. ಜಿಲ್ಲೆಯಾದ್ಯಂತ ಅಲ್ಲಲ್ಲಿ ಇದು ಕಾಣಿಸಿಕೊಳ್ಳುತ್ತಿದ್ದು, ಮಂಗಳೂರು ನಗರದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಹಗಲು ಹೊತ್ತಿನಲ್ಲಿ ಸೊಳ್ಳೆಗಳ ನಡುವೆ ಕೆಲಸ ಮಾಡುವವರಿಗೇ ಇದು ಸಮಸ್ಯೆ ತಂದೊಡ್ಡುತ್ತಿದ್ದು, ಜಿಲ್ಲಾಡಳಿತ ಇದೀಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹೊರಟಿದೆ. ಮನೆ ಮನೆ ಸಮೀಕ್ಷೆಗೆ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಸೂಚನೆ ನೀಡಿದ್ದು, ಅದರಂತೆ ಇಲಾಖೆಗಳು ಕಾರ್ಯೋನ್ಮುಖವಾಗಿವೆ. ಬುಧವಾರ ಈ ಕುರಿತು ಸಭೆಯೊಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಅಲ್ಲಿ ಏನೇನಾಯಿತು, ಇಲ್ಲಿದೆ ವರದಿ.

ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಮತ್ತು ನಿಯಂತ್ರಣ ಕುರಿತು ನಡೆದ ಸಭೆಯನ್ನು ಉದ್ದೇಶಿಸಿ ಮಾತಾನಾಡಿದ ಜಿಲ್ಲಾಧಿಕಾರಿ, ಜ್ವರ ಪ್ರಕರಣವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ 200 ತಂಡ ರಚಿಸಿ ಮನೆ ಮನೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿ ಸಂಗ್ರಹಿಸಲು ಹಾಗೂ ಜನರಿಗೆ ಮಾಹಿತಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಮೀಕ್ಷೆ ನಡೆಸುವವರಿಗೆ ಮೊದಲಿಗೆ ತರಬೇತಿ ನೀಡಿ, ಕೂಡಲೇ ಕಾರ್ಯ ಪ್ರಾರಂಭಿಸಬೇಕು. ಪ್ರತಿದಿನ ಕನಿಷ್ಠ 50 ಮನೆಗಳಿಗೆ ತೆರಳಿ  ಮಾಹಿತಿ ನೀಡಿ ಹಾಗೂ ಹೆಚ್ಚಾಗಿ ಪ್ರಕರಣ ದಾಖಲಾದ ಪ್ರದೇಶಗಳಿಗೆ ನಿಗಾ ವಹಿಸಿ ಸಮೀಕ್ಷೆ ನಡೆಸಿ ವರದಿ ಸಂಗ್ರಹಿಸಬೇಕು.  ಮಂಗಳೂರಿನಲ್ಲಿ ಸಾಕಷ್ಟು ಜನತೆ ಖಾಸಗಿ ಆಸ್ಪತ್ರೆಗೆ ತೆರಳುವುದರಿಂದ ಅಧಿಕಾರಿಗಳು ಆಸ್ವತ್ರೆಯಲ್ಲಿ ಪ್ರತಿದಿನ ದಾಖಲಾಗುವಂತಹ ಶಂಕಿತ ಜ್ವರ ಪ್ರಕರಣಗಳ ಮಾಹಿತಿಯನ್ನು ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಪ್ರತಿದಿನದ ವರದಿ ನೀಡಬೇಕು ಎಂದು ಹೇಳಿದರು.

ಅಲ್ಲಲ್ಲಿ ಮಳೆನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ, ಹೀಗಾಗಿ ಮನೆ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು, ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಮುಖ್ಯವಾಗಿ ಮಹಡಿ, ಡ್ರಮ್, ಬಕೆಟ್ ಇತ್ಯಾದಿ ವಸ್ತುಗಳಲ್ಲಿ ಸಂಗ್ರಹವಾಗುವ ಶುದ್ದ ಮಳೆ ನೀರಿನಲ್ಲಿಯೇ ಸೊಳ್ಳೆ ಉತ್ಪತ್ತಿಯಾಗುವುದು ಆದರಿಂದ ಮನೆ ಸುತ್ತಮುತ್ತ ಮಳೆ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದು ಅವರು ತಿಳಿಸಿದರು.

ಡೆಂಗ್ಯೂ ಸಾಮಾನ್ಯ ವೈರಲ್ ಜ್ವರವಾಗಿದ್ದು ಜನತೆ ಹಗಲು ಹೊತ್ತಿನಲ್ಲಿ ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಬೇಕು. ರಾತ್ರಿ ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಬೇವಿನ ಎಣ್ಣೆ ಹಚ್ಚಿ ಹಾಗೂ ಮಕ್ಕಳ, ವಯಸ್ಕರ ಬಗ್ಗೆ ಹೆಚ್ಚಿನ ಜಾಗೃತಿವಹಿಸಿ. ಸಾಮಾನ್ಯ ಜ್ವರ, ತಲೆನೊವು ಬಂದಾಗ ನಿರ್ಲಕ್ಷಿಸದೆ ಚಿಕಿತ್ಸೆ ಪಡೆದುಕೊಳ್ಳಬೇಕು. ಸೊಳ್ಳೆ ಹೆಚ್ಚಾಗಿ ಉತ್ಪತ್ತಿಯಾಗುವ ಪ್ರದೇಶಕ್ಕೆ ಮಹಾನಗರ ಪಾಲಿಕೆ ವತಿಯಿಂದ ಮನೆ ಮನೆ ತೆರಳಿ ಫಾಗಿಂಗ್ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಜನತೆ ಭಯಭೀತರಾಗದೇ  ಸರಿಯಾದ ರೀತಿಯಲ್ಲಿ ಸಹಕರಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ ಆರ್ ಸೆಲ್ವಮಣಿ, ಮಹಾನಗರಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್,  ತರಬೇತುದಾರರಾದ ರಾಹುಲ್ ಸಿಂಧ್ಯಾ, ನೋಡೆಲ್ ಅಧಿಕಾರಿ ಡಾ ಶರೀಫ್ ಹಾಗೂ ಡಾ ರವಿಕುಮಾರ್ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts