ಬಂಟ್ವಾಳ

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ : ಕಂಡಡೊಂಜಿ ದಿನ

ಬಂಟ್ವಾಳ ತಾಲೂಕಿನ ಕುರ್ನಾಡು ಬೃಹದಾದ ಗದ್ದೆಯಲ್ಲಿ ಮಕ್ಕಳ ಕಲರವ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಕೆಸರಿನಲ್ಲಿ ಓಡಾಡಿದರು. ಬಿದ್ದರು, ಗೆದ್ದರು. ಸೋತರು. ಎಲ್ಲವನ್ನೂ ಮರೆತು ಸಂಭ್ರಮಪಟ್ಟರು. ಹಾಳೆ ಬಂಡಿ ಊಟ ಹಳೆಯ ಸಂಪ್ರದಾಯದ ಮಕ್ಕಳಾಟವನ್ನು ನೆನಪಿಸಿತು. ಮಕ್ಕಳ ಮೂರು ಕಾಲಿನ ಓಟ ಮತ್ತು ಕೂಸುಮರಿ ಆಟವು ನೋಡುಗರನ್ನು ನಗೆಗಡಲಿನಲ್ಲಿ ತೇಲಿಸಿತು. ಮಂಗಳೂರು ನಗರದ ವಿದ್ಯಾರ್ಥಿಗಳ ಸಂಭ್ರಮವನ್ನು ಹಳ್ಳಿಯ ನಾಗರಿಕರು, ಕೃಷಿಕರು, ಜನಪ್ರತಿನಿಧಿಗಳು ವೀಕ್ಷಿಸಿ, ಸಂತಸವನ್ನು ವ್ಯಕ್ತಪಡಿಸಿದರು.

 

ಇದು ಶನಿವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕ್ರೀಡಾ ಸಂಘಗಳ ಆಶ್ರಯದಲ್ಲಿ ಕುರ್ನಾಡು ಅಂಗಣೆಮಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿ ಇರುವ ಗದ್ದೆಯಲ್ಲಿ ಪದವಿ, ಪದವಿಪೂರ್ವ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಕಂಡಡೊಂಜಿ ದಿನದ ಅರ್ಥಪೂರ್ಣ ಕಾರ್ಯಕ್ರಮ.

ಜಿ.ಪಂ.ಮಾಜಿ ಸದಸ್ಯ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಹಿಂಗಾರ ಅರಳಿಸಿ, ಉದ್ಘಾಟಿಸಿ, ಮಾತನಾಡಿ, ಗ್ರಾಮೀಣ ಪ್ರದೇಶದ ಗದ್ದೆಗೆ ನಗರದ ಮಕ್ಕಳನ್ನು ಇಳಿಸಿ, ಬೇಸಾಯದ ಮಾಹಿತಿ ನೀಡುವ ಶಿಕ್ಷಣ ಅರ್ಥಪೂರ್ಣವಾಗಿದೆ. ಪಠ್ಯದ ಜತೆಗೆ ಭಾರತೀಯ ಸಂಸ್ಕೃತಿ, ಶಿಷ್ಟಾಚಾರ, ಆಚಾರ, ವಿಚಾರಗಳನ್ನು ತಿಳಿಸುವ ಈ ಸಂಪ್ರದಾಯ ಶಿಕ್ಷಣ ಮಾರ್ಗದಲ್ಲಿ ಅತೀ ಅಗತ್ಯ. ಗದ್ದೆಯಲ್ಲಿ ಆಟೋಟಗಳನ್ನು ಏರ್ಪಡಿಸುವುದು ಕೂಡಾ ಸೂಕ್ತವಾಗಿದೆ. ಆ ಅವಕಾಶವನ್ನು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಒದಗಿಸುತ್ತಿರುವುದು ಅತ್ಯಂತ ಶ್ರೇಷ್ಠವಾಗಿದೆ ಎಂದು ಹೇಳಿದರು.

ಕುರ್ನಾಡು ಗ್ರಾ.ಪಂ.ಅಧ್ಯಕ್ಷೆ ಶೈಲಜಾ ಹೇಮನಾಥ ಮಿತ್ತಕೋಡಿ ಅವರು ಅಧ್ಯಕ್ಷತೆ ವಹಿಸಿದ್ದರು. ಕುರ್ನಾಡು ಗ್ರಾ.ಪಂ.ಸದಸ್ಯ ಗೋಪಾಲ ಬಂಗೇರ, ಮಾಜಿ ಅಧ್ಯಕ್ಷ ಕೆ.ದೇವದಾಸ್ ಭಂಡಾರಿ, ಕುರ್ನಾಡು ಹನ್ನೆರಡು ಮುಡಿ ಶ್ರೀ ನಾಗಬ್ರಹ್ಮ ಆದಿಮಾಯೆ ದೇವಸ್ಥಾನದ ಮೊಕ್ತೇಸರ ರಮೇಶ್ ಕುಮಾರ್, ಪ್ರಗತಿಪರ ಕೃಷಿಕ ಕೊಣಾಜೆ ಶಂಕರ ಭಟ್, ಪ್ರಗತಿಪರ ಕೃಷಿಕ ಭೋಜ, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಭಟ್, ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ಶುಭಹಾರೈಸಿದರು.

ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜೀವನ್‌ದಾಸ್ ಅವರು ಪ್ರಸ್ತಾವಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್. ಸ್ವಾಗತಿಸಿ, ಉಪನ್ಯಾಸಕ ಸೂರ್ಯನಾರಾಯಣ ಭಟ್ ವಂದಿಸಿದರು. ಅಂಕಿತಾ ನೀರ್ಪಾಜೆ, ದಿವ್ಯಶ್ರೀ, ಪ್ರಶಾಂತ್ ಗಾಂವ್ಕರ್ ಆಶಯಗೀತೆ ಹಾಡಿದರು. ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ನಿರ್ವಹಿಸಿದರು. ಉಪನ್ಯಾಸಕ ಪ್ರವೀಣ್ ಪಿ. ಸಹಕರಿಸಿದರು.

ಬಳಿಕ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ 100 ಮೀ ಓಟ, ಹಾಳೆ ಬಂಡಿಯನ್ನು ಎಳೆದುಕೊಂಡು ಓಟ, ಮೂರು ಕಾಲು ಓಟ, ಕೂಸುಮರಿ, ಹಗ್ಗಜಗ್ಗಾಟ, ನಿಧಿಶೋಧ ಇತ್ಯಾದಿ ಆಟೋಟಗಳನ್ನು ಏರ್ಪಡಿಸಲಾಯಿತು.

ಸಮಾರೋಪ:

ಶನಿವಾರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಇಂದು ಕುರ್ನಾಡು ತಾ.ಪಂ. ಸದಸ್ಯ ನವೀನ್ ಪಾದಲ್ಪಾಡಿ, ಮಾನವನಿಗೆ ಸದಾ ಅನಾರೋಗ್ಯ ಕಾಡುತ್ತದೆ. ಹಿಂದಿನ ಕಾಲ ಶ್ರಮ ಜೀವನವಾಗಿತ್ತು ಮತ್ತು ಆರೋಗ್ಯದಾಯಕವಾಗಿತ್ತು. ಗದ್ದೆಯಲ್ಲಿ ಕೆಸರು ಮೆತ್ತಿದ ಶರೀರಕ್ಕೆ ಅನಾರೋಗ್ಯ ಕಾಡುವುದಿಲ್ಲ. ಇಂದು ಆಧುನಿಕ ಯುಗದಲ್ಲಿ ಶರೀರ ಬೆವರುವುದಿಲ್ಲ. ಎಲ್ಲವೂ ಕುಳಿತಲ್ಲೇ ಕರ್ತವ್ಯ ನಿರ್ವಹಿಸುವುದು ಕಂಡು ಬರುತ್ತದೆ. ಇಂದು ಇಡೀ ದಿನ ವಿದ್ಯಾರ್ಥಿಗಳು ಗದ್ದೆಯಲ್ಲಿ ಸಂತಸ, ಸಂಭ್ರಮಪಟ್ಟಿದ್ದು, ಕೃಷಿಯ ಅನುಭವವನ್ನು ಅರ್ಥ ಮಾಡಿಕೊಳ್ಳುವಂತಾಗಿದೆ ಎಂದು ಹೇಳಿದರು.

ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಪಡೆಯುವುದು ಮುಖ್ಯ. ಈ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ. ಮುಂದಿನ ವರ್ಷ ಮಕ್ಕಳ ಜತೆ ಉಪನ್ಯಾಸಕರು, ಸಮಿತಿ ಪದಾಧಿಕಾರಿಗಳು ಗದ್ದೆಯಲ್ಲಿಳಿದು ಜತೆಗೂಡಲಿದ್ದಾರೆ ಎಂದರು.

ಕುರ್ನಾಡು ಗ್ರಾ.ಪಂ.ಉಪಾಧ್ಯಕ್ಷ ನಿತಿನ್ ಕುಮಾರ್ ಗಟ್ಟಿ, ಗ್ರಾ.ಪಂ.ಸದಸ್ಯ ಶಿವಶಂಕರ ಭಟ್, ಕುರ್ನಾಡು ಶ್ರೀ ದತ್ತಾತ್ರೇಯ ಅ.ಹಿ.ಪ್ರಾ.ಶಾಲೆ ಸಂಚಾಲಕ ಗಣೇಶ ನಾಯ್ಕ, ಪ್ರಗತಿಪರ ಕೃಷಿಕ ಕೊಣಾಜೆ ಶಂಕರ ಭಟ್, ಪ್ರಗತಿಪರ ಕೃಷಿಕ ಸುಂದರ ದೇವಾಡಿಗ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜೀವನ್‌ದಾಸ್, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತೇಶ್ ದೇವಾಂಗ ಶುಭಹಾರೈಸಿದರು.

ಇದೇ ಸಂದರ್ಭ ಗದ್ದೆ ಮತ್ತು ನೀರು ಪೂರೈಸಿದ ಭೋಜ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಿಧಿ ಶೋಧದಲ್ಲಿ ಪಲ್ಲವಿ ಪ್ರಥಮ ಮತ್ತು ವೆಂಕಿತಾ ದ್ವಿತೀಯ ಬಹುಮಾನ ಪಡೆದರು.

ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರತಿಮ್ ಕುಮಾರ್ ವಂದಿಸಿದರು. ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ನಿರ್ವಹಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್. ಮತ್ತು ಉಪನ್ಯಾಸಕ ಪ್ರವೀಣ್ ಪಿ.ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ಗ್ರಂಥಪಾಲಕಿ ಜಯಂತಿ, ತೀರ್ಪುಗಾರರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಪ್ರತಿಮ್ ಕುಮಾರ್ ಮತ್ತು ಜಯಪ್ರಕಾಶ್ ಸಹಕರಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ