ಬಂಟ್ವಾಳ

ಮಕ್ಕಳ ಸುರಕ್ಷತೆ ನಮಗಿದೆ, ಕಾನೂನಿನ ನಿಯಮ ಸಡಿಲಿಸಿ: ಶಾಲಾ ವಾಹನ ಚಾಲಕ, ಮಾಲೀಕರ ಮನವಿ

www.bantwalnews.com Editor: Harish Mambady

ಮಕ್ಕಳ ಸುರಕ್ಷತೆಯ ಬಗ್ಗೆ ಕಾಳಜಿ ನಮಗೂ ಇದೆ. ಆದರೆ ಅದೇಶದ ನೆಪದಲ್ಲಿ ವಾಹನ ತಪಾಸಣೆ ಮಾಡಿ ನಿಲ್ಲಿಸಿ, ದಂಡ ವಿಧಿಸುವ ಮೂಲಕ ಸಮಸ್ಯೆ ಉಂಟಾಗುತ್ತಿದ್ದು, ನಿಯಮಗಳನ್ನು ಸಡಿಲಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾವಾಹನ ಸಾಗಾಟ ಮಾಲೀಕ, ಚಾಲಕರ ಸಂಘ ಕರೆ ನೀಡಿರುವ ಪ್ರತಿಭಟನೆಯನ್ವಯ ಬಂಟ್ವಾಳ ತಾಲೂಕಿನಲ್ಲಿ ಮುಷ್ಕರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಎಎಸ್ಪಿ ಸೈದುಲು ಅದಾವತ್ ಅವರನ್ನು ಗುರುವಾರ ಭೇಟಿ ಮಾಡಿದ ಸಂಘದ ಸದಸ್ಯರು, ಈ ಕುರಿತು ಮನವಿ ಮಾಡಿ ಆಡಳಿತದ ಗಮನ ಸೆಳೆದರು. ಶುಕ್ರವಾರವೂ ಶಾಲಾ ಮಕ್ಕಳ ವಾಹನಗಳ ಸಾಗಾಟ ಇರುವುದಿಲ್ಲ ಎಂದು ಸಂಘದ ತಾಲೂಕು ಅಧ್ಯಕ್ಷ ಸದಾನಂದ ನಾವರ ತಿಳಿಸಿದ್ದಾರೆ.

 

ಬೆಳಗ್ಗೆ ಮಿನಿ ವಿಧಾನಸೌಧದ ಮುಂಭಾಗ ಸಭೆ ಸೇರಿದ ಚಾಲಕರು, ಬಳಿಕ ಅಲ್ಲಿಂದ ಎಎಸ್ಪಿ ಸೈದುಲು ಅದಾವತ್ ಅವರ ಕಚೇರಿಗೆ ತೆರಳಿದರು. ಬಂಟ್ವಾಳ ಖಾಸಗಿ ಶಾಲಾ ಮಕ್ಕಳ ವಾಹನ ವನ್ನು ಜುಲೈ 11 ಗುರುವಾರ ಹಾಗೂ ಜುಲೈ 12 ಶುಕ್ರವಾರ ದಂದು ನಮ್ಮ ವಾಹನಗಳನ್ನು ನಿಲ್ಲಿಸಿ ಸಾಂಕೇತಿಕ ಪ್ರತಿಭಟನೆ ಮಾಡುತ್ತಿದ್ದೇವೆ. ಸಂಚಾರಿ ನಿಯಮಗಳನ್ನು ನಾವು ಪಾಲಿಸುತ್ತಿದ್ದು, ಮಕ್ಕಳನ್ನು ಕರೆದೊಯ್ಯುವಾಗ ಗರಿಷ್ಠ ಮಟ್ಟದಲ್ಲಿ ಜಾಗ್ರತೆ ವಹಿಸುತ್ತೇವೆ. ನಿಯಮಗಳನ್ನು ಸಡಿಲಿಸಿದರೆ ಬಡ ಚಾಲಕ ವರ್ಗಕ್ಕೆ ಬದುಕಲು ಸಹಾಯವಾಗುತ್ತದೆ. ಅಲ್ಲದೆ ಪೋಷಕ ವರ್ಗದ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ ಎಂದು ಈ ಸಂದರ್ಭ ಹೇಳಿದ ಸಂಘದ ಅಧ್ಯಕ್ಷ ಸದಾನಂದ ನಾವರ ಮತ್ತು ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕ- ಮಾಲಕರ ಸಂಘ ಬಂಟ್ವಾಳ ಅಧ್ಯಕ್ಷ ಬಿ.ಎಂ. ಪ್ರಭಾಕರ ದೈವಗುಡ್ಡೆ, ಬಸ್ ಗಳಲ್ಲಿ ಮಿತಿಮೀರಿ ಪ್ರಯಾಣಿಕರನ್ನು ಹೇರಿಕೊಂಡು ಸಂಚರಿಸುವುದನ್ನು ಗಮನಿಸದೆ ಕೇವಲ ಶಾಲಾ ವಾಹನಗಳನ್ನು ತಪಾಸಿಸಲಾಗುತ್ತದೆ. ಕೆಲವು ವಾಹನಗಳ ಮೇಲೆ ಎರಡೆರಡು ಬಾರಿ ದಂಡ ವಿಧಿಸಿ, ಚಾಲಕರ ಲೈಸನ್ಸ್ ಮುಟ್ಟುಗೋಲು ಹಾಕಿದ್ದುಂಟು, ಇಂಥ ಸನ್ನಿವೇಶದಲ್ಲಿ ನಾವು ಕೆಲಸ ಮಾಡಲು ಸಮಸ್ಯೆ ಉಂಟಾಗುತ್ತದೆ ಎಂದು ಎಎಸ್ಪಿ ಅವರಲ್ಲಿ ಮನವಿ ಮಾಡಿದರು.

ಈ ಸಂದರ್ಭ ಉತ್ತರಿಸಿದ ಎಎಸ್ಪಿ ಸೈದುಲು ಅದಾವತ್, ನಾವು ಸರಕಾರದ ನಿಯಮಗಳನ್ನು ಪಾಲಿಸುತ್ತೇವೆ. ಶಾಲಾ ವಾಹನ ಸಾಗಾಟ ಚಾಲಕರಿಗೆ ತೊಂದರೆ ಮಾಡುವ ಇರಾದೆ ನಮಗಿಲ್ಲ. ನೀವು ಸಂಚಾರಿ ನಿಯಮಗಳನ್ನು ಪಾಲಿಸಿದರೆ ಯಾವುದೇ ಸಮಸ್ಯೆ ಇಲ್ಲ. ನಿಮ್ಮ ಧ್ವನಿಯನ್ನು ಮೇಲಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ದ.ಕ.ಜಿಲ್ಲಾ ಶಾಲಾ ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಜಯರಾಮ ಆಚಾರ್ಯ, ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವಸಂತ ಚಂಡ್ತಿಮಾರ್, ಪ್ರಮುಖರಾದ ರಾಜಾ ಚಂಡ್ತಿಮಾರ್, ಇಕ್ಬಾಲ್, ಸೀತಾರಾಮ, ಕಿರಣ್ ಪಿಂಟೋ, ಮ್ಯಾಕ್ಸಿಂ ಸಹಿತ ಹಲವು ವಾಹನ ಚಾಲಕರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ