ಇಂಟರ್ ಲಾಕ್ ಬ್ಯಾಂಡೇಜ್ ಕಿತ್ತುಹೋಗಿದೆ!!!
ಬಂಟ್ವಾಳನ್ಯೂಸ್ www.bantwalnews.com ಸಂಪಾದಕ: ಹರೀಶ ಮಾಂಬಾಡಿ
ಮೊನ್ನೆಯಷ್ಟೇ ಈ ಹೊಂಡಕ್ಕೆ ಇಂಟರ್ ಲಾಕ್ ನಿಂದ ‘ಬ್ಯಾಂಡೇಜ್’ ಹಾಕಲಾಗಿತ್ತು. ಆದರೆ ಗುರುವಾರ ಅದೂ ಕಿತ್ತುಹೋಗಿದೆ. ಮತ್ತೆ ಹೊಂಡ ಪ್ರತ್ಯಕ್ಷ.
ಇದೇನು ಹೊಸ ವಿಷಯ ಎಂದುಕೊಂಡಿರಾ, ನಿತ್ಯಸಂಚಾರಿಗಳಿಗೆ ಇದು ಮಾಮೂಲು. ಆದರೆ ಮಂಗಳೂರಿನಿಂದ ಬಿ.ಸಿ.ರೋಡಿಗೆ ಬಂದು ನಾರಾಯಣಗುರು ವೃತ್ತದ ಕಡೆಗೆ ಹೋಗುವವರಾದರೆ ಇಲ್ಲೊಂದು ಸೂಚನೆ.
ಬಿ.ಸಿ.ರೋಡ್ ಫ್ಲೈಓವರ್ ಪಕ್ಕ ಇರುವ ಪೆಟ್ರೋಲ್ ಪಂಪ್ ಎದುರಿನಿಂದ ವಾಹನ ಚಲಾಯಿಸುವಾಗ ಜಾಗ್ರತೆ. ಹೊಂಡಗಳು ಮತ್ತು ಟ್ರಾಫಿಕ್ ಜಾಮ್ ನಿಮ್ಮನ್ನು ಕಾಡಬಹುದು.
ವಾಹನಗಳನ್ನು ಹೊಂಡಕ್ಕೆ ಇಳಿಸದೆ ಹೋಗಲು ಸಾಧ್ಯವೇ ಇಲ್ಲದಂಥ ಪರಿಸ್ಥಿತಿ ಈಗಿದೆ. ದ್ವಿಚಕ್ರ ವಾಹನ ಸವಾರರು ಇಲ್ಲಿ ಆಯತಪ್ಪಿ ಬೀಳುವುದನ್ನು ಲೆಕ್ಕಹಿಡಿದವರಿಲ್ಲ. ಏಕೆಂದರೆ ದಿನಕ್ಕೆ ಮೂರು ನಾಲ್ಕು ದ್ವಿಚಕ್ರ ವಾಹನ ಸವಾರರು ಇಲ್ಲಿ ಗಲಿಬಿಲಿಗೊಳ್ಳುತ್ತಾರೆ. ಬಸ್ಸು, ಲಾರಿಗಳು, ಕಾರುಗಳು ದಿಕ್ಕುತಪ್ಪಿದರೂ ಧಡಕ್ಕನೆ ಹೊಂಡಕ್ಕೆ ಬೀಳಿಸಲೇಬೇಕಾಗುತ್ತದೆ.
ಎಲ್ಲಿದೆ ಹೊಂಡ:
ಹಳೇ ಎಲ್ಲೈಸಿ ಕಚೇರಿ ಇದ್ದ ಜಾಗದ ಎದುರು ಈ ಸಮಸ್ಯೆ ಉದ್ಭವವಾಗಿದೆ. ಇಲ್ಲಿ ರಸ್ತೆಯಲ್ಲೇ ನೀರು ಹರಿಯುತ್ತದೆ. ಒಂದು ಪಾರ್ಶ್ವ ಫ್ಲೈಓವರ್ ಇದ್ದರೆ ಮತ್ತೊಂದು ಭಾಗದಲ್ಲಿ ಅರೆತೆರೆದ ಚರಂಡಿ ಇದೆ. ಅಲ್ಲೇ ತಾಗಿಕೊಂಡು ಅಂಗಡಿ ಮುಂಗಟ್ಟುಗಳಿವೆ. ಚರಂಡಿ ಮೇಲೆ ಹಾಕಲಾದ ಮುಚ್ಚಳಗಳ ಮೇಲೆ ನಡೆದುಕೊಂಡು ಹೋಗುವಾಗಲೂ ಕೆಳಗೆ ನೋಡದಿದ್ದರೆ ಅನಾಹುತ ಗ್ಯಾರಂಟಿ.
ಕಳೆದ ವರ್ಷವೇ ಇದೇ ಜಾಗದಲ್ಲಿ ಹೊಂಡ ಉದ್ಭವವಾಗಿತ್ತು. ಆ ಸಂದರ್ಭ ಬಂಟ್ವಾಳನ್ಯೂಸ್ ವಿಶೇಷ ವರದಿಯನ್ನೂ ಮಾಡಿತ್ತು. ಆ ಸಂದರ್ಭ ಒಮ್ಮೆ ತೇಪೆ ಹಾಕಿದ್ದು ಬಿಟ್ಟರೆ ಮತ್ತೆ ಯಾರೂ ಅದರ ಸುದ್ದಿಗೇ ಬರಲಿಲ್ಲ. ಕೆಲವರು ಹೇಳಿಕೆಗಳನ್ನು ಕೊಟ್ಟು ಸುದ್ದಿಯಾದರು.
ದೊಡ್ಡವರಿಗೂ ಇದೇ ಮಾರ್ಗ:
ಮಂಗಳೂರಿನಿಂದ ಧರ್ಮಸ್ಥಳಕ್ಕೆ ರಸ್ತೆ ಮಾರ್ಗದಲ್ಲಿ ತೆರಳುವ ಗಣ್ಯಾತಿಗಣ್ಯರು ಎಲ್ಲರೂ ಇದೇ ಹೊಂಡಕ್ಕೆ ತಮ್ಮ ವಾಹನಗಳನ್ನು ಹಾಕಿ ಮುಂದುವರಿಯಬೇಕು. ದೊಡ್ಡ ದೊಡ್ಡ ಮನುಷ್ಯರು ಅನಿಸಿಕೊಂಡವರೆಲ್ಲ ಇದೇ ಮಾರ್ಗದಲ್ಲಿ ಸಾಗಬೇಕು. ಆದರೆ ಹೊಂಡಕ್ಕೆ ದೊಡ್ಡವರು, ಸಣ್ಣವರು ಎಂಬ ತಾರತಮ್ಯವೇ ಇಲ್ಲ!!
ಅತ್ಯಂತ ವಿಚಿತ್ರವಾದ ಫ್ಲೈಓವರ್ ಹೊಂದಿರುವ ಕುಖ್ಯಾತಿ ಪಡೆದಿರುವ ಬಿ.ಸಿ.ರೋಡ್ ನಲ್ಲಿ ಫ್ಲೈಓವರ್ ತಳಭಾಗದಿಂದಲೇ ನೀರು ಕೆಳಗೆ ಬೀಳುತ್ತದೆ. ಹೊಂಡ ತಪ್ಪಿಸಿ ಮುಂದೆ ಹೋಗುವವರಿಗೆ ಬೀಳುವ ನೀರು ತಪ್ಪಿಸುವುದೂ ಸವಾಲು. ಆದರೆ ಈ ಬಾರಿ ಜೋರಾದ ಮಳೆ ಬೀಳದ ಕಾರಣ ಈ ಸಮಸ್ಯೆ ಕಾಣಿಸುತ್ತಿಲ್ಲ.
ರಸ್ತೆ ಅಗೆದು ಸಮಸ್ಯೆ ಹಿರಿದು
ಬಿ.ಸಿ.ರೋಡಿನಲ್ಲಿ ಹಾದುಹೋಗುವ ಹೆದ್ದಾರಿಯಲ್ಲಷ್ಟೇ ಅಲ್ಲ, ಮಿನಿ ವಿಧಾನಸೌಧದ ಕಡೆ ಹೋಗುವ ಕೈಕುಂಜೆ ರಸ್ತೆಯ ಅಲ್ಲಲ್ಲಿ ಅಗೆದು ಹೊಂಡಕ್ಕೆ ಹಾರುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಟೇಟ್ ಬ್ಯಾಂಕ್ ಮುಂಭಾಗ ರಸ್ತೆ ಆಳವಾಗಿ ಅಗೆದಿದ್ದರೆ, ಮಿನಿ ವಿಧಾನಸೌಧದ ಎದುರೇ ಭಾಗ ಮಾಡಲಾಗಿದೆ. ಮೆಸ್ಕಾಂ ಕಚೇರಿಗೆ ತಿರುಗುವ ಜಾಗದಲ್ಲೂ ಕಾಂಕ್ರೀಟ್ ಕೊರೆಯಲಾಗಿದ್ದು, ಅದನ್ನು ಮುಚ್ಚಲು ಅಗೆದವರು ಮರೆತಿದ್ದಾರೆ. ಬಂಟ್ವಾಳನ್ಯೂಸ್ ಆಗಾಗ್ಗೆ ಸರಣಿ ವರದಿಗಳನ್ನು ಮಾಡುತ್ತಾ ಬಿ.ಸಿ.ರೋಡ್ ಸಮಸ್ಯೆಗಳನ್ನು ಆಡಳಿತದ ಗಮನಕ್ಕೆ ತರುವ ಕೆಲಸ ಮಾಡುತ್ತಿದೆ.
ಕಳೆದ ವರ್ಷ ಬಂಟ್ವಾಳನ್ಯೂಸ್ ಪ್ರಕಟಿಸಿದ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿರಿ…