ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಬಂಟ್ವಾಳ ತಾಲೂಕು ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಬಂಟ್ವಾಳದಿಂದ ಶ್ರೀ ಧರ್ಮಸ್ಥಳ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಪ್ರಯುಕ್ತ ಜನಮಂಗಲ ಕಾರ್ಯಕ್ರಮದಡಿ ಶನಿವಾರ ಬಂಟ್ವಾಳದ ಎಸ್.ಡಿ.ಎಂ. ಸಭಾಂಗಣದಲ್ಲಿ ವಿಕಲಚೇತನರಿಗೆ ಸಲಕರಣೆ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಧರ್ಮಸ್ಥಳ ಯೋಜನೆಯ ಸಮುದಾಯ ಮತ್ತು ಅಬಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಎ.ಶ್ರೀಹರಿ ಮಾತನಾಡಿ, ಯೋಜನೆಯ ಕಾರ್ಯಸ್ವರೂಪಗಳನ್ನು ವಿವರಿಸಿದರು. ರಾಜ್ಯದಲ್ಲಿ ಎದುರಾಗುವ ಸಮುದಾಯದ ಸಮಸ್ಯೆಗಳಿಗೆ ಶ್ರೀ.ಕ್ಷೇತ್ರ ಧರ್ಮಸ್ಥಳದಿಂದ ತುರ್ತು ಸ್ಪಂದನ ನೀಡಲಾಗುತ್ತಿದೆ. ನಮ್ಮೂರ ನಮ್ಮ ಕೆರೆ ಯೋಜನೆಯಡಿ ಕೆರೆಗಳ ಪುನರ್ ಜೀವನಗೊಳಿಸಿ ಅಂರ್ತಜಲ ವೃದ್ದಿಗೆ ಕಾರ್ಯಕ್ರಮ ಹಾಕಲಾಗುತ್ತಿದೆ ಎಂದರು. ರಾಷ್ಟ್ರದ ಹೊಸ ಕನಸುಗಳು ಸಾಕಾರಗೊಳ್ಳುವಲ್ಲಿ ನಾವೆಲ್ಲರೂ ಕಟಿಬದ್ದರಾಗಬೇಕಾಗಿದ್ದು, ಸರಕಾರದ ಯೋಜನೆಗಳನ್ನು ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಜೋಡಿಸಿಕೊಂಡು ಆರ್ಥಿಕ ವಾಗಿ ಸದೃಡವಾಗುವಂತೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಸಲಕರಣೆ ವಿತರಿಸಿ ಮಾತನಾಡಿದ ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಕಸ, ಕಡ್ಡಿ, ತ್ಯಾಜ್ಯದಿಂದ ಮಲೀನಗೊಳ್ಳುತ್ತಿರುವ ಜಿಲ್ಲೆಯ ಜೀವನದಿ ನೇತ್ರಾವತಿಯ ಶುಚಿತ್ವವನ್ನು ಕಾಪಾಡುವ ಅಗತ್ಯವಿದ್ದು,ಈ ನಿಟ್ಟಿನಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಆಂದೋಲನ ನಡೆಯಬೇಕಾಗಿದೆ ಎಂದರು.
ಈ ಸಂದರ್ಭ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹರೀಶ ಮಾಂಬಾಡಿ, ಫರಂಗಿಪೇಟೆ ಸೇವಾಂಜಲಿಯ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬಿ.ಸಿ.ರೋಡ್ ವಲಯಾಧ್ಯಕ್ಷ ರೊನಾಲ್ಡ್ ಡಿಸೋಜ, ಬಂಟ್ವಾಳ ತಾಲೂಕು ಕೇಂದ್ರ ಒಕ್ಕೂಟ ಅಧ್ಯಕ್ಷ ಮಾಧವ ವಳವೂರು, ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಸದಾನಂದ ನಾವೂರ, ಪತ್ರಕರ್ತ ವೆಂಕಟೇಶ್ ಬಂಟ್ವಾಳ, ಫರಂಗಿಪೇಟೆ ಸೇವಾಂಜಲಿ ಟ್ರಸ್ಟ್ ನ ಟ್ರಸ್ಟಿ ಕೃಷ್ಣಕುಮಾರ ಪೂಂಜಾ , ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ , ಬಿಸಿರೋಡ್ ವಲಯ ಮೇಲ್ವಿಚಾರಕ ಕೇಶವ ಉಪಸ್ಥಿತರಿದ್ದರು.
ಟ್ರಸ್ಟ್ ನ ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶ್ವಿನಿ ವಂದಿಸಿದರು. ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ 77 ಮಂದಿಗೆ ಸಲಕರಣೆಗಳನ್ನು ವಿತರಿಸಲಾಯಿತು.