ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಣಾ ಶುಲ್ಕವನ್ನು ಕಟ್ಟಡ ತೆರಿಗೆಯೊಂದಿಗೆ ಸಂಗ್ರಹಿಸುತ್ತಿರುವುದನ್ನು ಕಾಂಗ್ರೆಸ್ ಆಕ್ಷೇಪಿಸಿದೆ.
ಈ ಕುರಿತು ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಮೂಲಕ ಪುರಸಭೆಗೆ ಆಯ್ಕೆಯಾದ ಕಾಂಗ್ರೆಸ್ ಸದಸ್ಯರ ನಿಯೋಗ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು. ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕಸ ಸಂಗ್ರಾಹಣಾ ಶುಲ್ಕವನ್ನು ಕಟ್ಟಡ ತೆರಿಗೆಯೊಂದಿಗೆ ಸಂಗ್ರಹಿಸುತ್ತಿರುವ ಕ್ರಮ ಸರಿಯಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಸದಸ್ಯರಾದ ಬಿ ವಾಸು ಪೂಜಾರಿ, ಗಂಗಾಧರ ಪೂಜಾರಿ, ಜನಾರ್ಧನ ಚೆಂಡ್ತಿಮಾರ್, ಮಹಮ್ಮದ್ ನಂದರ್ ಬೆಟ್ಟು, ಲುಕ್ಮಾನ್ ಮನ್ಜಿಲ್, ಹಸೈನಾರ್, ಮಹಮ್ಮದ್ ಶೆರಿಫ್ , ಲೋಲಾಕ್ಷ ಶೆಟ್ಟಿ, ರಾಮಕೃಷ್ಣ ಆಳ್ವ, ಅಬೂಬಕ್ಕರ್ ಸಿದ್ಧಿಕ್, ಜೆಸಿಂತಾ ಡಿಸೋಜ , ಗಾಯತ್ರಿ ಪ್ರಕಾಶ್ ಹಾಜರಿದ್ದರು.
ಬಂಟ್ವಾಳ ಪುರಸಭೆಯ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳು ಇನ್ನೂ ಇವೆ. ಕಂಚಿನಡ್ಕಪದವಿನಲ್ಲಿ ಇನ್ನೂ ತ್ಯಾಜ್ಯ ವಿಲೇವಾರಿಯ ಕುರಿತು ಸಮರ್ಪಕವಾದ ವ್ಯವಸ್ಥೆ ಆಗಿಲ್ಲ. ದೈನಂದಿನ ತ್ಯಾಜ್ಯ ನಿರ್ವಹಣೆಯೇ ಪುರಸಭೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಿದ್ದೂ ಚುನಾವಣಾ ನೀತಿ ಸಂಹಿತೆ ಜಾರಿ ಇದ್ದ ಸಂದರ್ಭ, ಪುರಸಭೆ ಅಡ್ವಾನ್ಸ್ ಆಗಿ ಆಸ್ತಿ ತೆರಿಗೆ ಸಂಗ್ರಹಿಸಲು ಬರುವವರ ಬಳಿ ತ್ಯಾಜ್ಯ ನಿರ್ವಹಣಾ ಶುಲ್ಕವನ್ನೂ ವಸೂಲು ಮಾಡುತ್ತಿತ್ತು. ಆ ಸಂದರ್ಭವೇ ನಾಗರಿಕರು ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕ್ರಮ ಸರಿಯಲ್ಲ, ತ್ಯಾಜ್ಯ ವಿಲೇವಾರಿಯ ಕುರಿತು ಸರಿಯಾದ ವ್ಯವಸ್ಥೆ ಏರ್ಪಡಿಸಿದ ಬಳಿಕವಷ್ಟೇ ಕಸ ನಿರ್ವಹಣೆಯ ಬಗ್ಗೆ ಮುಂಗಡ ಶುಲ್ಕವನ್ನು ವಸೂಲಿ ಮಾಡಿ ಎಂದು ತೆರಿಗೆ ಕಟ್ಟಲು ಆಗಮಿಸುತ್ತಿದ್ದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.