ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳು ಉಂಟಾದಾಗ ಅವನ್ನು ಒಪ್ಪಿಕೊಳ್ಳುವ ಮನೋಸ್ಥಿತಿ ನಿರ್ಮಾಣವಾಗಬೇಕು. ಆಗಷ್ಟೇ ಶಿಕ್ಷಣ ದೃಢವಾಗಿ ಮುನ್ನಡೆಯುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.
ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ, ಶಾರೀರಿಕ, ಬೌದ್ಧಿಕ ಸಾಮಾಜಿಕ ಮತ್ತು ಆಧ್ಯಾತ್ಮಿಕ ಆಯಾಮಗಳನ್ನು ಶ್ರೀರಾಮ ಪದವಿ ಕಾಲೇಜು ನಡೆಸುತ್ತಿರುವುದನ್ನು ಶ್ಲಾಘಿಸಿದ ಅವರು, ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಸಮಾಜದ ಸಚ್ಚಾರಿತ್ಯವನ್ನು ಉಳಿಸುವ ನಿಟ್ಟಿನಲ್ಲಿ ದೇಶದ ಗರಿಮೆ, ಹಿರಿಮೆ, ಸಂಸ್ಕಾರ, ಸಂಸ್ಕೃತಿಯನ್ನು ಶಿಕ್ಷಣದ ಜೊತೆಗೆ ಎತ್ತಿ ಹಿಡಿಯುವ ವಿದ್ಯಾ ಸಂಸ್ಥೆಗಳ ಅವಶ್ಯಕತೆ ಇದೆ ಎಂದರು.
ಎನ್.ಎಂ.ಪಿ.ಟಿ. ಅಧ್ಯಕ್ಷ ಎ. ವೆಂಕಟರಮಣ ಅಕ್ಕರಾಜು ಮಾತನಾಡಿ, ಜೀವನ ಮೌಲ್ಯಗಳನ್ನು ಕಲಿಸುವ ನಮ್ಮ ಸಂಸೃತಿರಾಮಾಯಣ, ಪುರಾಣಗಳನ್ನು ಕಲಿಸಲು ಹಿಂಜರಿಯುತ್ತಿರುವ ಈ ಕಾಲದಲ್ಲಿ ಈ ಶಿಕ್ಷಣ ಸಂಸ್ಥೆಯು ಮಾದರಿಯಾಗಿದ್ದು, ಮುಂದೊಂದು ದಿನ ಸ್ವರ್ಣ ಭಾರತವನ್ನು ಕಾಣುವ ಭರವಸೆ ಇದೆ ಎಂದರು.
ಆರ್.ಟಿಐ ಕಮೀಷನರ್ ಸಂತೋಷ್. ಯಲ್. ಪಾಟೀಲ್ ಅಗ್ನಿ ಹೋತ್ರದ ಮೂಲಕ ಪ್ರವೇಶೋತ್ಸವಕ್ಕೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬೆಳಗಾವಿ, ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ ಮಾತನಾಡಿ ವಿದ್ಯಾರ್ಥಿಯ ವಿದ್ಯಾಭ್ಯಾಸವು ಭರತಮಾತೆಗೆ ಮುಡಿಪಾಗಿರಲಿ ಎಂದರು.
ಚಲನ ಚಿತ್ರ ನಿರ್ಮಾಪಕ ಟಿ. ಆರ್.ಚಂದ್ರಶೇಖರ, ಉದ್ಯಮಿ ಪ್ರಕಾಶ್ ಭಟ್, ಪ್ಯಾರಾಒಲಂಪಿಕ್ ಸ್ವರ್ಣಪದಕ ವಿಜೇತ ನಯಮತ್ತುಲ್ಲಾಖಾನ್, ಮುನೀಶ್ಕುಮಾರ್, ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹಸಂಚಾಲಕ ರಮೇಶ್ಎನ್, ರಾಷ್ಟ್ರ ಸೇವಿಕಾ ಸಮಿತಿ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು. ಬಂಕಿಮ ಚಂದ್ರಚಟರ್ಜಿಯವರ ಜನ್ಮದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿನಿ ವಿದ್ಯಾಶ್ರೀ ವಂದೇ ಮಾತರಂ ಹಾಡಿದರು. ಈ ಸಂದರ್ಭ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ತಿಲಕಧಾರಣೆ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ, ಅಗ್ನಿಗೆ ಹವಿಸ್ಸನ್ನು ಅರ್ಪಿಸಿದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಸಾಕ್ಷ್ಯ ವಂದಿಸಿದರು. ಭವಾನಿ ಕಾರ್ಯಕ್ರಮ ನಿರೂಪಿಸಿದರು.