ಬಂಟ್ವಾಳದಿಂದ ಮೂಡುಬಿದಿರೆಗೆ ತೆರಳುವ ರಸ್ತೆಯಲ್ಲಿ ಎಸ್.ವಿ.ಎಸ್. ಕಾಲೇಜು ಮತ್ತು ಹೈಸ್ಕೂಲು ಮಧ್ಯೆ ಇರುವ ತಿರುವಿನಲ್ಲಿ ಮರವೊಂದು ರಸ್ತೆಗೆ ಉರುಳಿಬಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಬುಧವಾರ ಸಂಜೆ ಸುಮಾರು 6 ಗಂಟೆ ವೇಳೆಗೆ ನಡೆದಿದೆ.
ಸಂಜೆ ಬಲವಾದ ಗಾಳಿಯೊಂದಿಗೆ ಮಳೆ ಬಂದಿದ್ದು, ಈ ಸಂದರ್ಭ ಮರ ರಸ್ತೆಗೆ ಉರುಳಿದೆ. ಇದಕ್ಕೆ ಕೆಲ ಕ್ಷಣ ಮೊದಲು ಈ ಭಾಗದಲ್ಲಿ ವಾಹನ ಸಾಗಿದ್ದು, ಮರ ಬೀಳುವ ಸಂದರ್ಭ ವಾಹನಗಳಿಲ್ಲದ ಕಾರಣ ಅನಾಹುತವೊಂದು ತಪ್ಪಿಹೋದಂತಾಗಿದೆ.
ಸುದ್ದಿ ತಿಳಿದು ಬಂಟ್ವಾಳ ಅಗ್ನಿಶಾಮಕ ಇಲಾಖೆ, ವಿದ್ಯುತ್ ಮತ್ತು ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ, ಮರ ತೆರವುಗೊಳಿಸುವ ಪ್ರಕ್ರಿಯೆ ಹಾಗೂ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬೇರೆಡೆಗೆ ಕಳುಹಿಸುವ ಕಾರ್ಯವನ್ನು ಸ್ಥಳೀಯರ ನೆರವಿನಿಂದ ಮಾಡಿದರು. ಸುಮಾರು ಅರ್ಧ ಗಂಟೆಯ ಬಳಿಕ ಉರುಳಿದ ಮರವನ್ನು ರಸ್ತೆಯ ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.