ಬೀಡಿ ಕಾರ್ಮಿಕರಲ್ಲಿ ಹೆಚ್ಚಿನವರು ಅನಕ್ಷರಸ್ಥರಾಗಿದ್ದು, ಆಧಾರ್ ಕಾರ್ಡ್ ನಲ್ಲಿ ಜನನ ದಾಖಲೆ ಹೊಂದಾಣಿಕೆಯಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಸರಿಪಡಿಸಲು ಸರಕಾರ ಉಪಕ್ರಮಿಸಬೇಕು ಎಂದು ಪಾಣೆಮಂಗಳೂರು ಫಿರ್ಕಾ ಬೀಡಿ ಎಂಡ್ ಜನರಲ್ ವರ್ಕರ್‍ಸ್ ಯೂನಿಯನ್(ಎಐಟಿಯುಸಿ) ನ 42 ನೇ ವಾರ್ಷಿಕ ಮಹಾಸಭೆಯಲ್ಲಿ ಆಗ್ರಹಿಸಲಾಯಿತು.
ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆದ ಮಹಾಸಭೆಯಲ್ಲಿ ಮಾತನಾಡಿದ ಮುಖಂಡರು, ಕೇಂದ್ರ ಜಾರಿಗೆ ತಂದ ಡಿಜಿಟಲೀಕರಣ ಯೋಜನೆಯನ್ನು ಭವಿಷ್ಯನಿಧಿ ಇಲಾಖೆಯು ಅನುಷ್ಠಾನಗೊಳಿಸಿದ ಪರಿಣಾಮ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡಿನ ದಾಖಲೆಗಳು ಮತ್ತು ಭವಿಷ್ಯನಿಧಿ ದಾಖಲೆಗಳು ಹೊಂದಾಣಿಕೆಯಾಗದೇ ಬೀಡಿ ಕಾರ್ಮಿಕರು ಕಷ್ಟ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಾಸ್ತವವಾಗಿ ಬಹುತೇಕ ಬೀಡಿ ಕಾರ್ಮಿಕರು ಅನಕ್ಷರಸ್ಥರಾಗಿದ್ದು ಬೀಡಿ ಕಂಪೆನಿಗೆ ಸೇರುವ ಸಂದರ್ಭದಲ್ಲಿ ಅಂದಾಜಿಗೆ ನೀಡಿರುವ ಜನನದ ವಿವರಗಳೇ ಭವಿಷ್ಯನಿಧಿ ಡಾಟ ದಲ್ಲಿ ದಾಖಲಿದ್ದು ಇದೀಗ ಭವಿಷ್ಯನಿಧಿ ಅರ್ಜಿ ಮಾಡುವ ಸಂದರ್ಭದಲ್ಲಿ ಆನ್ ಲೈನ್ ನಲ್ಲಿ ಡಾಟ ಹೊಂದಾಣಿಕೆಯಾಗದೇ ಅರ್ಜಿ ತಿರಸ್ಕೃತಗೊಳ್ಳುತ್ತಿದ್ದು ಇದರಿಂದ ಬೀಡಿ ಕಾರ್ಮಿಕರು ತಾನು ದುಡಿದು ಸಂಪಾದಿಸಿದ ಹಣವನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಆಧಾರ್ ತಿದ್ದುಪಡಿ ಮಾಡಲು ಆಗದೇ, ತನ್ನ ಭವಿಷ್ಯನಿಧಿ ಹಣವನ್ನು ಪಡೆಯಲೂ ಆಗದೇ ಮಾನಸಿಕ ಒತ್ತಡಕ್ಕೆ ಬೀಡಿ ಕಾರ್ಮಿಕರು ಒಳಗಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸರಕಾರ ಆಧಾರ್ ಕಾರ್ಡನ್ನು ಸರಿಪಡಿಸಲು ಅವಕಾಶ ನೀಡಬೇಕು ಇಲ್ಲವೇ ಭವಿಷ್ಯನಿಧಿ ಇಲಾಖೆಯು ಆಧಾರ್ ಕಾರ್ಡನ್ನು ಜನನ ದಾಖಲೆಯಾಗಿ ಪರಿಗಣಿಸದೇ ಭವಿಷ್ಯನಿಧಿ ಸಂಬಂಧಿತ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ನಿರ್ಣಯಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಐಟಿಯುಸಿ ಜಿಲ್ಲಾ ಅಧ್ಯಕ್ಷರಾದ ಕೆ.ವಿ.ಭಟ್ , ಸಿಪಿಐ ಜಿಲ್ಲಾ ಕಾರ್‍ಯದರ್ಶಿ ವಿ.ಕುಕ್ಯಾನ್ ಮಾತನಾಡಿದರು.
ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್(ಎಐಟಿಯುಸಿ) ಮಂಗಳೂರು ಕೋಶಾಧಿಕಾರಿ ಎಂ.ಕರುಣಾಕರ್ ಶುಭಕೋರಿ ಮಾತನಾಡಿದರು. ಸಭೆಯಲ್ಲಿ ಬೀಡಿ ಕಾರ್ಮಿಕರಿಗೆ ರೂ.3000 ಪಿಂಚಣಿ ಜ್ಯಾರಿಗೊಳಿಸಲು ಆಗ್ರಹಿಸಲಾಯಿತು. ಕೇಂದ್ರ ಸರಕಾರ ಇತ್ತೀಚೆಗೆ ಅಸಂಘಟಿತ ಕಾರ್ಮಿಕರಿಗೆ ಜ್ಯಾರಿಗೊಳಿಸಲುದ್ದೇಶಿಸಲಾದ ಮಾಸಿಕ ಪಿಂಚಣಿ ಯೋಜನೆಯನ್ನು ಬಡ ಬೀಡಿ ಕಾರ್ಮಿಕರಿಗೂ ಜ್ಯಾರಿಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಗತವರ್ಷದಲ್ಲಿ ಸಂಘ ನಡೆಸಿದ ಚಟುವಟಿಕಾ ವರದಿ ಹಾಗೂ ಲೆಕ್ಕಪತ್ರವನ್ನು ಸಂಘದ ಪ್ರಧಾನ ಕಾರ್‍ಯದರ್ಶಿ ಸುರೇಶ್ ಕುಮಾರ್ ಮಂಡಿಸಿ ಸಭೆ ಸರ್ವಾನುಮತದಿಂದ ಅಂಗೀಕರಿಸಿತು. ಸುಮಾರು ೧೦ ಪ್ರಮುಖ ಬೇಡಿಕೆಗಳುಳ್ಳ ನಿರ್ಣಯಗಳನ್ನು ಕೋಶಾಧಿಕಾರಿ ಬಿ.ಶೇಖರ್ ಮಂಡಿಸಿದರು.
೨೦೧೯-೨೦ ನೇ ಸಾಲಿನ ಸುಮಾರು ೪೦ ಜನ ಸದಸ್ಯರಿರುವ ನೂತನ ಕಾರ್‍ಯಕಾರಿಸಮಿತಿ ಆಯ್ಕೆ ನಡೆದು ಅಧ್ಯಕ್ಷರಾಗಿ ಸರಸ್ವತಿ ಕಡೇಶಿವಾಲಯ, ಉಪಾಧ್ಯಕ್ಷರುಗಳಾಗಿ ಲಲಿತ ಬರಿಮಾರು, ಸೀತಾ ಅನಂತಾಡಿ, ಹಾಗೂ ಚಂದ್ರಿಕಾ ಇರಾ, ಪ್ರಧಾನ ಕಾರ್‍ಯದರ್ಶಿಯಾಗಿ ಸುರೇಶ್ ಕುಮಾರ್, ಸಹ ಕಾರ್‍ಯದರ್ಶಿಗಳಾಗಿ ಶಮಿತಾ, ಶುಭಾಷಿಣಿ, ಹಾಗೂ ಲೀಲಾವತಿ ಹಾಗೂ ಕೋಶಾಧಿಕಾರಿಯಾಗಿ ಬಿ.ಶೇಖರ್ ಆಯ್ಕೆಯಾದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಸರಸ್ವತಿ ಕಡೇಶಿವಾಲಯ ವಹಿಸಿದ್ದರು.
ವೇದಿಕೆಯಲ್ಲಿ ಬೀಡಿ ಎಂಡ್ ಟೊಬೆಕ್ಕೊ ಲೇಬರ್ ಯೂನಿಯನ್(ಎಐಟಿಯುಸಿ) ಉಪಾಧ್ಯಕ್ಷ ಶಿವಪ್ಪ ಕೋಟ್ಯಾನ್, ಬಂಟ್ವಾಳ ತಾಲೂಕು ಬೀಡಿ ಲೇಬರ್ ಯೂನಿಯನ್(ಎಐಟಿಯುಸಿ) ಕೋಶಾಧಿಕಾರಿ ಪ್ರೇಮನಾಥ ಕೆ. ಭಾರತೀಯ ಮಹಿಳಾ ಒಕ್ಕೂಟದ ಜಿಲ್ಲಾ ಕಾರ್‍ಯದರ್ಶಿ ಭಾರತಿ ಶಂಭೂರು, ಎಐವೈಎಫ್ ನ ಬಂಟ್ವಾಳ ತಾಲೂಕು ಕಾರ್‍ಯದರ್ಶಿ ಶ್ರೀನಿವಾಸ ಭಂಡಾರಿ, ನರಿಕೊಂಬು ಗ್ರಾಮಪಂಚಾಯತ್ ನ ಸದಸ್ಯೆ ಬೇಬಿ ಪಿ.ಸಂಜೀವ ಉಪಸ್ಥಿತರಿದ್ದರು. ಸಂಘದ ಸಹಕಾರ್‍ಯದರ್ಶಿ ಶಮಿತಾ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಸಂಘದ ಪ್ರ.ಕಾರ್‍ಯದರ್ಶಿ ಸುರೇಶ್ ಕುಮಾರ್ ಕಾರ್‍ಯಕ್ರಮ ನಿರೂಪಿಸಿದರು.