ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ದೇಹದ ಆಂತರಿಕ ಸಮಸ್ಯೆಗಳು ಶಮನವಾಗಿ ಆಯುಷ್ಯ ವೃದ್ಧಿಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪ್ರಾಣಾಯಾಮ ಹಾಗೂ ಸುಲಭ ಆಸನಗಳನ್ನು ಮಾಡಬೇಕು ಎಂದು ಆಯುರ್ವೇದ ತಜ್ಞ ಡಾ| ರಘುವೀರ್ ಅವಧಾನಿ ಹೇಳಿದರು.
ವಿಶ್ವಯೋಗ ದಿನಾಚರಣೆಯ ಅಂಗವಾಗಿ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ಯೋಗ ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ ನೀಡಿ ಮಾತನಾಡಿದರು. ವೃದ್ಧಾಪ್ಯದಲ್ಲಿ ಕಾಡುವ ಮರೆವಿನ ಕಾಯಿಲೆಯನ್ನು ಸತತ ಯೋಗದಿಂದ ನಿಯಂತ್ರಣಕ್ಕೆ ತರಬಹುದು. ಯೋಗಾಭ್ಯಾಸದಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಎಂದ ಅವರು, ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಯೋಗ ಆಸನಗಳ ಮಹತ್ವವನ್ನು ವಿವರಿಸಿ ಪ್ರದರ್ಶಿಸಿದರು. ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಿ. ಅಧ್ಯಕ್ಷತೆ ವಹಿಸಿದ್ದರು. ಯೋಗದ ಮಹತ್ವಭರಿತ ಲೇಖನ, ಗಾಯನ, ನೃತ್ಯ ಹಾಗೂ ರಸಪ್ರಶ್ನೆಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ೧೦ನೇ ತರಗತಿಯ ವಿದ್ಯಾರ್ಥಿನಿ ಸಿಮಿ ಆಯಿಶಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಜೂಲಿ ಟಿ. ಜೆ. ಮತ್ತು ಶ್ರುತಿಕಾ ಮಾರ್ಗದರ್ಶನ ನೀಡಿದರು.