ಬಂಟ್ವಾಳ: ಬಂಟ್ವಾಳ ವಿದ್ಯಾಗಿರಿಯ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆಯ ೨೦೧೯-೨೦ನೇ ಸಾಲಿನ ವಿದ್ಯಾರ್ಥಿಸಂಘ, ವಿಜ್ಞಾನ ಸಂಘ, ಮತ್ತು ಸಾಂಸ್ಕ್ರತಿಕ ಸಂಘಕ್ಕೆ ಚಾಲನೆ ನೀಡಲಾಯಿತು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ ದೀಪ ಬೆಳಗಿಸಿ ಉದ್ಧಾಟಿಸಿ ವಿವಿಧ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಯೂ ತನ್ನನ್ನು ತಾನು ಅರಿತುಕೊಂಡು ಶಾಲೆಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು, ನಾಯಕತ್ವದ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಅವರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರಕಾರಿ ಪ್ರೌಢಶಾಲೆ ಕೊಳ್ನಾಡು ಶಾಲೆಯ ವಿಜ್ಞಾನ ಶಿಕ್ಷಕ ಪರಮೇಶ್ವರ ಹೆಗಡೆ ಮಾತನಾಡಿ, ವಿದ್ಯಾರ್ಥಿದೆಸೆಯಲ್ಲಿಯೇ ಪರಿಸರದ ಮಹತ್ವವನ್ನು ಅರಿತು ಬಾಳಬೇಕು. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ ಎಂದು ಹೇಳಿದರು.
ಶಾಲಾ ಮುಖ್ಯೋಪಾದ್ಯಾಯಿನಿ ಸುಜಾತಾ ಬಿ. ಶುಭ ಹಾರೈಸಿದರು. ಶಾಲಾ ಆಡಳಿತಾಧಿಕಾರಿ ಐತಪ್ಪ ಪೂಜಾರಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ಹರಿಪ್ರಸಾದ್ ಉಪಸ್ಥಿತರಿದ್ದರು. ವಿಜ್ಞಾನ ಸಂಘದ ಕಾರ್ಯದರ್ಶಿ ಪ್ರಜ್ಜಲ್ ಎಸ್.ಬಿ, ಸಾಂಸ್ಕ್ರತಿಕ ಸಂಘದ ಕಾರ್ಯದರ್ಶಿ ನಮನ್ ವರದಿ ವಾಚಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಮಿಥಿಲ್ ಜೆ. ಸ್ವಾಗತಿಸಿ, ಶೈಮ್ ವಂದಿಸಿದರು. ವಂಶ ಕಾರ್ಯಕ್ರಮ ನಿರೂಪಿಸಿದರು.