ಮೂಲರಪಟ್ಣ ಸೇತುವೆ ಕಾಮಗಾರಿ ವಿಳಂಬಕ್ಕೆ ಸರಕಾರವೇ ನೇರ ಹೊಣೆಯಾಗಿದೆ ಎಂದು ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ದೂರಿದ್ದಾರೆ.
ಬಂಟ್ವಾಳ ಮತ್ತು ಮಂಗಳೂರು ತಾಲೂಕುನ್ನೊಳಗೊಂಡ ಪ್ರದೇಶಕ್ಕೆ ಸಂಪರ್ಕ ಸೇತುವೆಯಾಗಿರುವ ಮೂಲರಪಟ್ಣ ಸೇತುವೆಯು ಕಳೆದ ವರ್ಷ ಮಳೆಗಾಲ ಪ್ರಾರಂಭ ಸಮಯದಲ್ಲಿ ಮಂಗಳೂರು ತಾಲೂಕಿನ ವ್ಯಾಪ್ತಿಯ ಭಾಗವು ಕುಸಿದುಬಿದ್ದು ಸಾರ್ವಜನಿಕ ಸಂಪರ್ಕವೇ ಕಡಿದುಹೋಗಿತ್ತು. ಈ ಸಂದರ್ಭ ಕುಸಿದು ಬಿದ್ದ ಸೇತುವೆಯ ವೀಕ್ಷೀಸಲು ಬಂದ ಜನಸಾಗರದಲ್ಲಿ ಜನಪ್ರತಿನಿಧಿಗಳೇ ಅಧಿಕರಾಗಿದ್ದರು. ಸರಕಾರದ ಲೋಕೋಪಯೋಗಿ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಮೇತ ಬಂದವರೆಲ್ಲ ಶೀಘ್ರ ವರ್ಷದೊಳಗೆ ಸೇತುವೆ ಪುನರ್ ನಿರ್ಮಾಣ ಮಾಡಿ ಕೋಡಲಾಗುವುದು ಎಂದು ನೀಡಿದ ಭರವಸೆ ಹಾಗೇ ಉಳಿಯಿತು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಬೆಂಗಳೂರಿನಲ್ಲಿ ನಡೆದ ಪ್ರಥಮ ಅದಿವೇಶನ ಹಾಗೂ ಬೆಳಗಾವಿಯಲ್ಲಿ ನಡೆದ ಅದಿವೇಶನದಲ್ಲಿ ಪ್ರಸ್ತಾಪಿಸಿ ಲಭ್ಯ ಅನುದಾನ ವಿನಿಯೋಗಿಸಿ ತುರ್ತು ಕಾಮಗಾರಿ ಪ್ರಾರಂಭಕ್ಕೆ ಮನವಿ ಮಾಡಿದ್ದರೂ ರಾಜ್ಯ ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಂತೂ ತನಗೆ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದಾರೆ. ಸೇತುವೆ ಕುಸಿದು ಬಿದ್ದು ವರ್ಷ ಕಳೆದರೂ ಮುರಿದುಬಿದ್ದ ಸೇತುವೆಗೆ ಮರುಜೋಡಣೆ ಮಾಡಬಹುದೇ ಅಥವಾ ಹೊಸ ಸೇತುವೆ ನಿರ್ಮಾಣ ಮಾಡಬಹುದೇ ಎಂಬ ಸ್ಪಷ್ಟ ನಿರ್ದಾರಕ್ಕೆ ಬರಲು ಇಲಾಖೆಗೆ ಇಷ್ಟವರೆಗೆ ಸಮಯ ತಗಲಿದೆ. ಇನ್ನಾದರೂ ಜಿಲ್ಲೆಯಲ್ಲಿ ಸಂಬಂವಿಸುವ ಅತೀ ತುರ್ತು ಕಾಮಗಾರಿಗಳಿಗೆ ಜಿಲ್ಲಾ ಉಸ್ತುವರಿ ಸಚಿವರು, ಉನ್ನತ ಆಧಿಕಾರಿಗಳು ಗಮನ ನೀಡಿ, ಮೂಲರಪಟ್ಣ ಸೇತುವೆ ಕಾಮಗಾರಿ ಮುಂದಿನ ವರ್ಷವಾದರೂ ಆರಂಭಗೊಳ್ಳಲಿ ಎಂದು ಅವರು ಆಶಿಸಿದ್ದಾರೆ.