ಬಂಟ್ವಾಳ

ಪಾಣೆಮಂಗಳೂರು ಹಾಸ್ಟೆಲ್ ಗೆ ರಾಜೇಶ್ ನಾಯ್ಕ್ ಭೇಟಿ, ಪರಿಶೀಲನೆ

ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆಯಲ್ಲಿ ಕಾರ್ಯಾಚರಿಸುತ್ತಿರುವ ಶಿಥಿಲಾವಸ್ಥೆಗೆ ತಲುಪಿ ಕುಸಿಯುವ ಭೀತಿಯಲ್ಲಿರುವ ದೇವರಾಜು ಅರಸು ಬಾಲಕರ ಹಾಸ್ಟೆಲ್ ಕಟ್ಟಡಕ್ಕೆ ಮಂಗಳವಾರ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿದ್ದು, ಬಂಗ್ಲೆಗುಡ್ಡೆಯ ಪುರಸಭಾ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಈ ಬಾಲಕರ ಹಾಸ್ಟೆಲ್ ಕಟ್ಟಡ ಕಳೆದ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದು, ಕುಸಿಯುವ ಭೀತಿ ಎದುರಿಸುತ್ತಿದೆ. ಇತ್ತೀಚೆಗೆ ತೀವ್ರ ನಾದುರಸ್ಥಿಗೆ ತಲುಪಿದ ಕಟ್ಟಡದಲ್ಲಿ ವಿದ್ಯಾರ್ಥಿಗಳ ವಾಸ ಅಪಾಯಕಾರಿ ಎಂದರಿತು ಗುರುವಾರವಷ್ಟೆ ಇಲ್ಲಿನ ವಿದ್ಯಾರ್ಥಿಗಳನ್ನು ಮೊಗರ್ನಾಡುವಿನ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.

ಜಾಹೀರಾತು


ಈ ಬಗ್ಗೆ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಹಾಸ್ಟೆಲ್‌ಗೆ ಭೇಟಿ ನೀಡಿ, ಬಳಿಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಗೂ ಹಾಸ್ಟೆಲ್ ವಾರ್ಡನ್‌ಗಳಿಂದ ಮಾಹಿತಿ ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಣೆಮಂಗಳೂರಿನ ಬಂಗ್ಲೆಗುಡ್ಡೆಯ ಪುರಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ವಸತಿ ನಿಲಯ 120 ವರ್ಷಕ್ಕೂ ಹಳೆದಾಗಿದೆ. ಕಳೆದ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಗಳಾಗಿತ್ತು. ಈ ಕಟ್ಟಡ ಬಂಟ್ವಾಳ ಪುರಸಭೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿದ್ದು, ಈ ಕಟ್ಟಡವು ಮತ್ತಷ್ಟು ಶಿಥಿಲಗೊಂಡಿದೆ ಎಂದು ಹೇಳಿದರು.

ಹಳೆ ಹಾಸ್ಟೆಲ್ ಪಕ್ಕದಲ್ಲಿಯೇ ಇಲ್ಲಿನ ಬಾಲಕರಿಗಾಗಿ ನಿರ್ಮಿಸಿದ ಹೊಸ ಕಟ್ಟಡದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರಿಗೆ ವಸತಿ ವ್ಯವಸ್ಥೆ ಮಾಡಿದ್ದು, ಇದರಿಂದ ಇಲ್ಲಿರುವ 35 ಬಾಲಕರನ್ನು ಹಳೆ ಕಟ್ಟಡದಲ್ಲಿಯೇ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಹಳೆ ಕಟ್ಟಡವು ಮತ್ತಷ್ಟು ಶಿಥಿಲಗೊಂಡಿದ್ದು, ಘಟನೆಯ ಬಳಿಕ ಮಕ್ಕಳಿಗೆ ಇಲಾಖೆಯು ಈಗಾಗಲೇ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸುವ ಮೂಲಕ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸ ಕಟ್ಟಡ ನಿರ್ಮಿಸಲು ಸರಕಾರಕ್ಕೆ ಸಲ್ಲಿಕೆಯಾಗಿರುವ ಹಾಗೂ ಬಾಲಕಿಯರಿಗಾಗಿ ಕಾಮಾಜೆಯಲ್ಲಿ ನಿಗದಿಯಾಗಿರುವ ಸ್ಥಳದಪ್ರಸ್ತಾವದ ಬಗ್ಗೆ ದೂರವಾಣಿ ಕರೆ ಮೂಲಕ ಆಯುಕ್ತರೊಂದಿಗೆ ಚರ್ಚಿಸಿದ ಶಾಸಕರು, ಇನ್ನೆರಡು ದಿನಗಳಲ್ಲಿ ಈ ಪ್ರಸ್ತಾವಕ್ಕೆ ಆಯುಕ್ತರಿಂದ ಮಂಜೂರಾತಿ ಪಡೆದುಕೊಳ್ಳುಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಪರ್ಯಾಯ ವ್ಯವಸ್ಥೆ: ಇಲ್ಲಿನ ತ್ಯಾಜ್ಯ ನೀರು ಪಕ್ಕದ ಮನೆಗಳ ಮುಂಭಾಗದಲ್ಲಿ ಹರಿದು ಉಂಟಾಗುವ ಸಮಸ್ಯೆಯ ಬಗ್ಗೆ ಸ್ಥಳೀಯರು ಶಾಸಕ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಶಾಸಕರು ಆವರಣ ಗೋಡೆ ನಿರ್ಮಾಣ ಹಾಗೂ ತ್ಯಾಜ್ಯ ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಭರವಸೆ ನೀಡಿದರು.
ಹೊಸ ಹಾಸ್ಟೆಲ್ ಪರಿಶೀಲನೆ: ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು,  ಇಲ್ಲಿನ ವ್ಯವಸ್ಥೆ ಹಾಗೂ ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಾಸ್ಟೆಲ್‌ಗೆ ಪೂರೈಕೆಯಾಗುತ್ತಿರುವ ಆಹಾರ ಸಾಮಾಗ್ರಿಗಳ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆ ಬಂಟ್ವಾಳದ ವಿಸ್ತರಣಾಧಿಕಾರಿ ಎಸ್.ಶಿವಣ್ಣ, ಹಾಸ್ಟೆಲ್ ವಾರ್ಡನ್‌ಗಳಾದ ಭವಾನಿ, ಶಶಿಕಲಾ ಶೆಟ್ಟಿ, ಗಣೇಶ್ ರೈ ಮಾಣಿ, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts