ಪ್ರತಿ ವಿದ್ಯಾರ್ಥಿ ನಿರಂತರ ಅಭ್ಯಾಸ ಮಾಡಬೇಕು ಎಂದು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಪ್ರಿನ್ಸಿಪಾಲ್ ಡಾ. ಪಾಂಡುರಂಗ ನಾಯಕ್ ಹೇಳಿದರು.
ಕಾಲೇಜಿನಲ್ಲಿ ನಡೆದ ಪ್ರಥಮ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ಎನ್ನುವುದು ಭವಿಷ್ಯಕ್ಕೆ ರಹದಾರಿ ಇದ್ದಂತೆ. ಈ ಘಟ್ಟದಲ್ಲಿನ ನಮ್ಮ ನಡವಳಿಕೆ ನಮ್ಮ ಮುಂದಿನ ಜೀವನವನ್ನು ನಿರ್ಣಯಿಸಬಲ್ಲದು. ಇಂದಿನ ಸಾಧನೆ ಮುಂದಿನ ಬದುಕಿಗೆ ದಾರಿದೀಪವಾಗುತ್ತದೆ. ವಿದ್ಯಾರ್ಥಿಗಳಾದವರು ಜೀವನದಲ್ಲಿ ಶಿಸ್ತು ನಯ ವಿನಯಗಳನ್ನು ರೂಢಿಸಿಕೊಳ್ಳಬೇಕು. ಅದರಂತೆ ನಿರಂತರ ಜ್ಞಾನಾರ್ಜನೆಯ ಕಡೆ ಗಮನ ನೀಡಬೇಕು. ಇಲ್ಲಿ ಕಲಿತ ವಿದ್ಯಾರ್ಥಿಗಳು ನಿರಂತರ ರ್‍ಯಾಂಕ್ ಗಳಿಸಿರುತ್ತಾರೆ. ಇಂದು ದೇಶ ವಿದೇಶಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅದಕ್ಕೆ ಅವರ ಸಾಧನೆಯ ಕಾರಣ. ವಿದ್ಯಾರ್ಥಿಗಳಾದವರು ಆಧುನಿಕ ತಂತ್ರಜ್ಞಾನವನ್ನು ದುರುಪಯೋಗವಾಗದಂತೆ ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ರೊನಾಲ್ಡ್ ಡಿ ಸೋಜ ಮಾತನಾಡಿ ಹೆತ್ತವರು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕಾಲೇಜಿನ ಆಧಾರಸ್ತಂಭಗಳು, ಅಧ್ಯಾಪಕರನ್ನು ವಿದ್ಯಾರ್ಥಿಗಳು ಯಾವತ್ತೂ ಗೌರವಿಸಬೇಕು ಅದುವೇ ಅವರ ಸಾಧನೆ ಮತ್ತು ಪ್ರತಿಫಲಕ್ಕೆ ಶ್ರೀರಕ್ಷೆ ಎಂದರು.
ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಡಾ. ಎಚ್ ಆರ್ ಸುಜಾತ ಪ್ರಾಸ್ತವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೋ ನಾರಾಯಣ ಭಂಡಾರಿ ವಂದಿಸಿದರು. ಭೌತಶಾಸ್ತ್ರ ವಿಭಾಗ ಮುಖ್ಯಸ್ಥರಾದ ಶಶಿಕಲಾ ಎಂ ಪಿ, ಶಿಕ್ಷಕ ರಕ್ಷಕ ಸಂಘದ ಕಾರ್ಯಕಾರಿ ಸಮಿತಿ ರಚಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಶಿವಣ್ಣ ಪ್ರಭು ಕೆ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರಾದ ಕಾವ್ಯ ದಿವ್ಯಶ್ರೀ ಮತ್ತು ಪೂಜಾ ಪ್ರಾರ್ಥಿಸಿದರು.