ಬಂಟ್ವಾಳ

ಕಿಂಡಿ ಅಣೆಕಟ್ಟು ನಿರ್ಮಾಣಗೊಂಡ ಬಳಿಕ ನೀರಿಗೆ ಕೊರತೆಯಾಗದು: ರಮಾನಾಥ ರೈ

ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ಮಂಜೂರಾದ ಯೋಜನೆಯಿದು – ಸುದ್ದಿಗಾರರಿಗೆ ರೈ ಮಾಹಿತಿ

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಫಲ್ಗುಣಿ ನದಿಗೆ ಮೂರು ಕಿಂಡಿ ಅಣೆಕಟ್ಟು ಸಹಿತ ಸೇತುವೆ ನಿರ್ಮಾಣಗೊಳ್ಳಲಿದೆ. ಇದಾದ ಬಳಿಕ ನೀರಿಗೆ ಕೊರತೆಯಾಗದು, ಇದರಿಂದ ಅಂತರ್ಜಲ ವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ತೋಟ ಪುಚ್ಚಮೊಗರುವಿನ ಮಂಜಲ್ದೊಟ್ಟು ಮತ್ತು ಕರಿಯಂಗಳ ಗ್ರಾಮದ ಪೊಳಲಿಯಲ್ಲಿ ಪಶ್ಚಿಮ ವಾಹಿನಿ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಪ್ರಗತಿಯನ್ನು ಶುಕ್ರವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ  ಮಾತನಾಡಿದರು.

ಇದು ಸಿದ್ಧರಾಮಯ್ಯ ಸರಕಾರದ ಕೊಡುಗೆ, ತನ್ನ ಅವಧಿಯಲ್ಲಿ ನಡೆದ ಪ್ರಗತಿ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಪಶ್ಚಿಮಾಭಿಮುಖವಾಗಿ ಹರಿಯವ  ನದಿಗಳಿಗೆ ಅಲ್ಲಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ನೀರಿನ ಸಂಗ್ರಹಣೆ, ಅಂತರ್ಜಲ ಹೆಚ್ಚಿಸುವುದು ಹಾಗೂ ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ಯೊಜನೆಯಿದು ಅನುಷ್ಠಾನಗೊಳ್ಳುತ್ತಿದೆ. ದ.ಕ. ಜಿಲ್ಲೆಗೆ 265 ಕೋಟಿ ರುಪಾಯಿ, ಉಡುಪಿ ಜಿಲ್ಲೆಗೆ 80 ಕೋಟಿ ಹಾಗೂ ಉತ್ತರ ಕನ್ನಡ ಜಿಲ್ಲೆಗೆ 50ಕೋಟಿ ರುಪಾಯಿ ಮಂಜೂರಾತಿಯಾಗಿದೆ. ಪುಚ್ಚಮೊಗರುವಿನ ಮಂಜಲ್ದೊಟ್ಟುವಿನಲ್ಲಿ 7 ಕೋಟಿ ರುಪಾಯಿಯ ಅಣೆಕಟ್ಟು ಮತ್ತು ಸೇತುವೆ, ಕರ್ಪೆ ಗ್ರಾಮದ ತೋಟ ಎಂಬಲ್ಲಿ 15 ಕೋಟಿ ರುಪಾಯಿ ಕಿಂಡಿ ಅಣೆಕಟ್ಟು ಮತ್ತು ಸೇತುವೆ, ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ 12.5 ಕೋಟಿ ರುಪಾಯಿ ವೆಚ್ಚದ ಅಣೆಕಟ್ಟು ಮತ್ತು ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಈಗಾಗಲೇ ಎರಡು ಕಾಮಗಾರಿಗಳ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು ಒಂದು ಕಾಮಗಾರಿಯ ವಿನ್ಯಾಸದ ಬದಲಾವಣೆಗಾಗಿ ಮತ್ತೆ ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ ಎಂದರು.

ಬೇಸಗೆಯಲ್ಲೂ ಸಮಸ್ಯೆಯಾಗದು:

ಪುಚ್ಚಮೊಗರುವಿನಲ್ಲಿ ನಿರ್ಮಾಣಗೊಳ್ಳುವ ಕಿಂಡಿ ಅಣೆಕಟ್ಟಿನಿಂದ ಸಂಗಬೆಟು ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಬೇಸಿಗೆಯಲ್ಲಿ ನೀರಿನ ಕೊರತೆ ನೀಗಲಿದೆ. ಜಾತ್ರೋತ್ಸವ ಸಂಧರ್ಭದಲ್ಲಿ ಮಳಲಿಯಿಂದ ಪೊಳಲಿ ದೇವಸ್ಥಾನಕ್ಕೆ ಭಂಡಾರವನ್ನು ದೋಣಿಯ ಮೂಲಕ ನದಿ ದಾಟಿ ತರಬೇಕಾದ ಸನ್ನಿವೇಶ ಇದ್ದು ಪೊಳಲಿ ಅಣೆಕಟ್ಟು ಹಾಗೂ ಸೇತುವೆ ನಿರ್ಮಾಣಗೊಂಡರೆ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದು ರೈ ಹೇಳಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ ದಿನೇಶ್ ಸುಂದರ ಶಾಂತಿ, ದೇವಪ್ಪ ಕರ್ಕೇರಾ, ಚಂದ್ರಹಾಸ ಪಲ್ಲಿಪ್ಪಾಡಿ, ಜಗದೀಶ್ ಕೊಯಿಲಾ, ಶಿವಾನಂದ ರೈ, ಲಕ್ಷ್ಮೀಶ್ ಶೆಟ್ಟಿ, ಲೋಕಯ್ಯ ಪೂಜಾರಿ, ಗೋಪಾಲ ಪೂಜಾರಿ, ಶಿವಪ್ರಸಾದ್ ಕೂಡಾರಿಗುಡ್ಡೆ, ಮುಸ್ತಾಫ ಪಲ್ಲಿಪ್ಪಾಡಿ, ಜಯರಾಮ್ ಸಣ್ಣ ನೀರಾವರಿ ಇಲಾಖೆಯ ಎಂಜಿನಿಯರ್‌ಗಳಾದ  ಕೃಷ್ಣಕುಮಾರ್,  ಪ್ರಸನ್ನ  ಮೊದಲಾದವರು ಹಾಜರಿದ್ದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ