ಬಂಟ್ವಾಳ ತಾಲೂಕು ಪಿಲಿಮೊಗರು ಗ್ರಾಮದ ಬರೆಕ್ಕಿನಡಿ ಎಂಬಲ್ಲಿ ಮಂಗಳವಾರ ಸಂಜೆ ಬೀಸಿದ ಗಾಳಿಗೆ ವಿದ್ಯುತ್ ತಂತಿ ಕಡಿದುಬಿದ್ದು, ತಂದೆ, ಮಗಳು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಇಲ್ಲಿನ ಕೃಷಿಕ ಗೋಪಾಲಕೃಷ್ಣ ಶೆಟ್ಟಿ (63) ಮತ್ತು ಅವರ ಮಗಳು ದಿವ್ಯಶ್ರೀ (32) ಮೃತಪಟ್ಟವರು. ಮಂಗಳವಾರ ಸಂಜೆ ಸುಮಾರು 4 ಗಂಟೆಯ ವೇಳೆ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಬಲವಾಗಿ ಬೀಸಿದ ಗಾಳಿಗೆ ಅಡಕೆ ಮರದ ಸೋಗೆ ಹಳೆಯ ವಿದ್ಯುತ್ ತಂತಿ ಮೇಲೆ ಬಿದ್ದು, ಅದು ಕಡಿದುಬಿದ್ದಿದೆ. ಅಲ್ಲಿಗೆ ತೆರಳಿದ್ದ ಗೋಪಾಲಕೃಷ್ಣ ಶೆಟ್ಟಿ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದು, ಅವರನ್ನು ಹುಡುಕಲು ಹೋದ ಮಗಳು ದಿವ್ಯಶ್ರೀ ಅವರೂ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಗೋಪಾಲಕೃಷ್ಣ ಶೆಟ್ಟಿ ಪತ್ನಿ ಅವರೂ ಶಾಕ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಗ್ರಾಪಂ ಅಧ್ಯಕ್ಷ ಯತೀಶ್ ಶೆಟ್ಟಿ, ಮಾಜಿ ಅಧ್ಯಕ್ಷ ನವೀನ್ ಚಂದ್ರಶೆಟ್ಟಿ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್, ಮೆಸ್ಕಾಂ ಎಇಇ ಪ್ರಶಾಂತ್ ಪೈ, ಉಪತಹಶೀಲ್ದಾರ್ ರಾಜೇಶ್ ನಾಯ್ಕ್, ಕಂದಾಯ ನಿರೀಕ್ಷಕ ನವೀನ್ ಬೆಂಜನ ಪದವು, ಬಂಟ್ವಾಳ ವೃತ್ತ ನಿರೀಕ್ಷಕ ಶರಣಗೌಡ, ಎಸ್ಸೈ ಸುಧಾಕರ ತೋನ್ಸೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೂಕ್ತ ಪರಿಹಾರ ಒದಗಿಸಲು ಶಾಸಕ ಸೂಚನೆ: ಘಟನೆಯ ಕುರಿತು ಬೆಂಗಳೂರಿನಲ್ಲಿರುವ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಮಾಹಿತಿ ನೀಡಲಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಾಜಿ ಸಚಿವ ಬಿ. ರಮಾನಾಥ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅವರು ಆಸ್ಪತ್ರೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು.