ಬಿ.ಸಿ.ರೋಡ್ ಸ್ಟೇಟ್ ಬ್ಯಾಂಕ್ ಎದುರು ಪ್ರತಿ ಮಳೆ ಬಂದಾಗಲೂ ನೀರು ನಿಂತು ಕೆಸರಿನ ಸಮಸ್ಯೆಗೆ ಮುಕ್ತಿ ಹಾಡಲು ಬಂಟ್ವಾಳ ಪುರಸಭೆ ಮುಂದಾಗಿದೆ. ಈಗಾಗಲೇ ಭಾನುವಾರದಿಂದ ಜೆಸಿಬಿ ಸಹಾಯದಿಂದ ಸ್ಟೇಟ್ ಬ್ಯಾಂಕ್ ಪಕ್ಕದ ಚರಂಡಿಯನ್ನು ಹೂಳೆತ್ತಲಾಗುತ್ತಿದ್ದು, ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಲಾಗುತ್ತಿದೆ.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಈ ಕುರಿತು ಸ್ಥಳ ಪರಿಶೀಲನೆ ನಡೆಸಿ, ಪುರಸಭೆ ಅಧಿಕಾರಿಗಳಿಗೆ ಈ ಜಾಗವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆಗೊಳಿಸಲು ಸೂಚಿಸಿದ್ದರು.
ಹೆದ್ದಾರಿ ರಸ್ತೆ ಅಗಲಗೊಳಿಸುವ ಕಾಮಗಾರಿ ಇರುವೆಡೆ ಮಣ್ಣು ಕೆಸರಿನ ರೂಪಕ್ಕೆ ಪರಿವರ್ತನೆ ಹೊಂದಿದರೆ, ಚರಂಡಿ ಇದ್ದ ಜಾಗವೆಲ್ಲ ಮಣ್ಣಿನಿಂದ ಮುಚ್ಚಿ ಹೋಗಿರುವ ಕಾರಣ ನೀರು ಹರಿದುಹೋಗಲು ಜಾಗ ಹುಡುಕುತ್ತಿತ್ತು. ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕ್ ಎದುರು ಟೂರಿಸ್ಟ್ ಕಾರು ನಿಲ್ಲುವ ಬಳಿ ರಸ್ತೆಯಲ್ಲೇ ನೀರು ನಿಂತು ವಾಹನ ಸವಾರರಿಗಷ್ಟೇ ಅಲ್ಲ, ನಡೆದಾಡುವವರಿಗೂ ತೊಂದರೆ ಉಂಟಾಗುವ ಸ್ಥಿತಿ ಕಳೆದ ಕೆಲ ವರ್ಷಗಳಿಂದ ಇದೆ. ಬಿ.ಸಿ.ರೋಡ್ ಸ್ಟೇಟ್ ಬ್ಯಾಂಕ್ ಮತ್ತು ಪದ್ಮಾ ಕಾಂಪ್ಲೆಕ್ಸ್ ನ ಮಧ್ಯೆ ರಸ್ತೆಯೇ ವಾಹನ ನಿಲುಗಡೆಗಳಿಂದ ಅಗಲಕಿರಿದಾಗಿದ್ದು, ಆಗಾಗ್ಗೆ ಟ್ರಾಫಿಕ್ ಜಾಮ್ ಗೆ ಕಾರಣವಾಗುತ್ತಿದೆ. ಈ ರಸ್ತೆ ಮಿನಿ ವಿಧಾನಸೌಧ ಸಹಿತ ಹಲವು ಸರಕಾರಿ ಕಚೇರಿಗಳನ್ನು ಸಂಪರ್ಕಿಸುತ್ತದೆಯದರೂ ಇಲ್ಲಿ ಸಣ್ಣ ಮಳೆ ಬಂದರೆ ಎರಡರಿಂದ ಮೂರು ದಿನ ಕೆಸರುಮಿಶ್ರಿತ ನೀರು ನಿಲ್ಲುತ್ತದೆ. ಇದರಿಂದ ನಡೆದುಕೊಂಡು ಹೋಗುವವರು ತೊಂದರೆ ಅನುಭವಿಸಿದರೆ, ವಾಹನ ಸವಾರರೂ ಗಲಿಬಿಲಿ ಹೊಂದುತ್ತಾರೆ. ಮಳೆಗಾಲ ಆರಂಭಗೊಂಡ ಸಂದರ್ಭ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಈ ಜಾಗ ಹತ್ತಾರು ವರ್ಷಗಳಿಂದ ಇದೇ ಸ್ಥಿತಿಯಲ್ಲಿದೆ. ಸ್ಥಳೀಯ ಕಾರು ಮತ್ತು ವ್ಯಾನು ಚಾಲಕರ ಸಂಘ ಪ್ರತಿಭಟನೆಗೂ ಸಜ್ಜಾಗಿದ್ದರು.