ಹೂಳು ತೆರವಿನಿಂದ ನೇತ್ರಾವತಿಯಲ್ಲಿ ನೀರು ಹರಿದ ಹಿನ್ನೆಲೆಯಲ್ಲಿ ಶನಿವಾರ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಕ್ರಿಬೆಟ್ಟುವಿನ ಜಾಕ್‌ವೆಲ್‌ಗೆ ಭೇಟಿ ನೀಡಿ, ಪಂಪಿಂಗ್ ವ್ಯವಸ್ಥೆಯನ್ನು ವೀಕ್ಷಿಸಿದರು.
ಬಳಿಕ ನೇತ್ರಾವತಿ ನದಿಯಲ್ಲಿರುವ ಇಂಟೆಕ್‌ವೆಲ್‌ಗೆ ತೆರಳಿ ನೀರಿನ ಮಟ್ಟವನ್ನು ಪರಿಶೀಲನೆ ಮಾಡಿದರು. ಇದೀಗ ಜಕ್ರಿಬೆಟ್ಟುವಿನಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಾಗಿದೆ. ತುಂಬೆಯಲ್ಲಿ ಶುಕ್ರವಾರ ಸಂಜೆಯಿಂದ ನಿರಂತರ ಪಂಪಿಂಗ್ ನಡೆಯುತ್ತಿರುವುದರಿಂದ 2.34 ಮೀ.ನಷ್ಟಿದ್ದ ನೀರು, ಶನಿವಾರ 2.27 ಮೀ.ನಲ್ಲಿ ನೀರು ಇದೆ.
ಜಕ್ರಿಬೆಟ್ಟುವಿನ ಇಂಟೆಕ್‌ವೆಲ್‌ನಿಂದ ನೀರಿನ ಹರಿವಿನ ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಾದರಿಂದ ಇಂಟೆಕ್‌ವೆಲ್‌ನ ಸ್ಟೈನರ್ ಸಂಪೂರ್ಣವಾಗಿ ಮುಳುಗಿದೆ. ಇದರಿಂದ ಜಾಕ್‌ವೆಲ್‌ಗೆ ಸರಾಗವಾಗಿ ನೀರು ಪಂಪಿಂಗ್ ಕಾರ್ಯ ನಡೆಯುತ್ತಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಅವರು ಸಂಸದರಿಗೆ ಪೂರಕ ಮಾಹಿತಿ ನೀಡಿದರು.
ನೆಕ್ಕಿಲಾಡಿ ಡ್ಯಾಂನಿಂದ ಹೆಚ್ಚುವರಿ ನೀರು ಹರಿದುಬಂದು ಎಂಆರ್‌ಪಿಎಲ್ ಡ್ಯಾಂನ ಅಲ್ಲಲ್ಲಿ ಶೇಖರಣೆಯಾಗಿತ್ತು. ಕಳೆದ 2 ದಿನಗಳಿಂದ ಶಾಸಕ ರಾಜೆಶ್ ನಾಯ್ಕ್ ನೇತೃತ್ವದಲ್ಲಿ ಪುರಸಭಾ ಸದಸ್ಯ ಗೋವಿಂದ ಪ್ರಭು ಅವರು ಮುತುವರ್ಜಿ ವಹಿಸಿ, ಡ್ಯಾಂನ ಗೇಟ್ ಮತ್ತು ಪರಿಸರದಲ್ಲಿ ತುಂಬಿದ್ದ ಹೂಳನ್ನು ತೆರವುಗೊಳಿಸಿದ ಪರಿಣಾಮ ನೀರು ಕೊಂಚ ಹರಿಯಲಾರಂಭಿಸಿ ಶುಕ್ರವಾರ ಜಕ್ರಿಬೆಟ್ಟುವಿನಲ್ಲಿರುವ ಇಂಟೆಕ್‌ವೆಲ್‌ನಲ್ಲಿ ನೀರು ಶೇಖರಣೆಯಾಗಿತ್ತು. ಶುಕ್ರವಾರ ಸಂಜೆ ನೀರಿನ ಒಳ ಹರಿವು ಹೆಚ್ಚಾದರಿಂದ ಈ ಮೊದಲು ಇಂಟೆಕ್‌ವೆಲ್ ಸಮೀಪ ಕಟ್ಟಿದ್ದ ಕಟ್ಟವನ್ನು ತೆರವು ಮಾಡಿ ಹೆಚ್ಚುವರಿ ನೀರನ್ನು ತುಂಬೆ ಡ್ಯಾಂನತ್ತ ಹರಿಯಬಿಡಲಾಗಿದೆ.
ಈ ಸಂದರ್ಭ ಪುರಸಭಾ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ದೇವದಾಸ ಶೆಟ್ಟಿ, ಬಿಜೆಪಿ ಮುಖಂಡರಾದ ಸುಲೋಚನಾ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥ ರಾಯಿ ಮೊದಲಾದವರಿದ್ದರು.