ಬಂಟ್ವಾಳ

ಮುಂದಿನ ಫೆಬ್ರವರಿಯೊಳಗೆ ಬಂಟ್ವಾಳ ರೈಲ್ವೆ ಸ್ಟೇಶನ್ ಅಭಿವೃದ್ಧಿ ಕಾರ್ಯ ಪೂರ್ಣ: ನಳಿನ್ ಕುಮಾರ್ ಕಟೀಲ್

ಜಾಹೀರಾತು

ಬಂಟ್ವಾಳ: ಮುಂದಿನ ಫೆಬ್ರವರಿ ತಿಂಗಳೊಳಗೆ ಬಂಟ್ವಾಳ ರೈಲ್ವೆ ಸ್ಟೇಶನ್ ನಲ್ಲಿ ಕೇಂದ್ರ ಆದರ್ಶ ಯೋಜನೆಯಡಿ ನಡೆಯುತ್ತಿರುವ ಸುಮಾರು 5.5 ಕೋಟಿ ರೂ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಕಾಮಗಾರಿ ಪರಿಶೀಲನೆಗಾಗಿ ಶಾಸಕ ಯು.ರಾಜೇಶ್ ನಾಯ್ಕ್ ಜೊತೆ ಶನಿವಾರ ಮಧ್ಯಾಹ್ನ ಬಿ.ಸಿ.ರೋಡಿನ ಕೈಕುಂಜೆಯಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಸೆಕ್ಷನ್ ಇಂಜಿನಿಯರ್ ಕೆ.ಪಿ.ನಾಯ್ಡು ಅವರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು ಅಧಿಕಾರಿಗಳಿಗೆ ಕಾಮಗಾರಿ ವೇಗವಾಗಿ ನಡೆಸುವ ಕುರಿತು ಸಲಹೆ ಸೂಚನೆಗಳನ್ನು ನೀಡಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ಸೂಚಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್, ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿರುವ ಎರಡು ಪ್ಲಾಟ್ ಫಾರ್ಮ್ ಗಳ ವಿಸ್ತರಣಾ ಕಾರ್ಯ ನಡೆಯುತ್ತಿದ್ದು, ಮೊದಲನೇ ಪ್ಲಾಟ್ ಫಾರ್ಮ್ ಶೇ.50 ಮತ್ತು ಎರಡನೇ ಪ್ಲಾಟ್ ಫಾರ್ಮ್ ಶೇ.60ರಷ್ಟು ಕೆಲಸಗಳಾಗಿವೆ. 67 ಲಕ್ಷ ರೂ ವೆಚ್ಚದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಇದಾದರೆ ರೈಲು ನಿಲ್ದಾಣ ಬಿ.ಸಿ.ರೋಡಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದರು.  ಪ್ಲಾಟ್ ಫಾರ್ಮ್ ಗೆ ಮೇಲ್ಛಾವಣಿ, ವಿದ್ಯುದ್ದೀಪ, ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಶುದ್ಧೀಕರಿಸಿದ ಕುಡಿಯುವ ನೀರು, ಅಂಗವಿಕಲರಿಗೆ ವಿಶೇಷ ಶೌಚಗೃಹ, ಹೊಸ ಶೌಚಾಲಯ ಕಾಂಪ್ಲೆಕ್ಸ್ ರಚನೆ, ಪ್ಲಾಟ್ ಫಾರ್ಮ್ ಸುತ್ತಲೂ ಆವರಣಗೋಡೆ ನಿರ್ಮಾಣವಾಗುತ್ತಿರುವ ಕಾರಣ ಇಲ್ಲಿ ರೈಲು ಬರುವ ಹೊತ್ತಿಗೆ ಪ್ಲಾಟ್ ಫಾರ್ಮ್ ನಲ್ಲಿರುವ ಬೆಂಚು, ಆಸನಗಳಲ್ಲಿ ಪ್ರಯಾಣಿಕರಲ್ಲದವರು ಆಸೀನರಾಗದಂತೆ ಮಾಡುವುದು, ಎಲ್ಲಿಂದಲೋ ಬಂದು ಇಲ್ಲಿ ಕುಳಿತು ವ್ಯವಹಾರ ಮಾಡುವವರನ್ನು ನಿಲ್ಲದಂತೆ ಮಾಡಲು ರೈಲ್ವೆ ಭದ್ರತಾ ವ್ಯವಸ್ಥೆ ಗಟ್ಟಿಗೊಳಿಸುವುದು ಹಾಗೂ ರೈಲ್ವೆ ಸೇತುವೆಯಲ್ಲಿ ನಡೆದುಕೊಂಡು ಹೋಗಲು ಹಳಿಯ ಬಳಿಯಲ್ಲಿ ಕಿತ್ತು ಹೋಗಿರುವ ಶೀಟ್ ಗಳನ್ನು ಮತ್ತೆ ಹಾಕಿಸಲಾಗುತ್ತದೆ ಎಂದರು.

ತತ್ಕಾಲ್ ಬುಕ್ಕಿಂಗ್ ಸಂದರ್ಭ ಮಧ್ಯವರ್ತಿಗಳದ್ದೇ ಹಾವಳಿ ಜಾಸ್ತಿ ಇರುತ್ತದೆ. ಇಂಥ ಸನ್ನಿವೇಶಗಳು ನಿರ್ಮಾಣವಾಗದಂತೆ ಎಚ್ಚರವಹಿಸಬೇಕು ಎಂದು ಸಾರ್ವಜನಿಕರ ದೂರುಗಳು ಬಂದಿವೆ, ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು, ರೈಲ್ವೆ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಹಾಗೂ ಅಕ್ರಮ ಚಟುವಟಿಕೆಗಳು ನಡೆಸದಂತೆ ಸಿಸಿ ಕ್ಯಾಮರಾ ನಿಗಾ ವಹಿಸಲಿದೆ ಎಂದರು,

ಕೈಕುಂಜೆ ಪೂರ್ವ ಬಡಾವಣೆಗೆ ತಿರುಗುವ ರಸ್ತೆ ಸಹಿತ ಯಾವುದೇ ಜನವಸತಿ ಪ್ರದೇಶಗಳಿಗೆ ತೆರಳುವ ರಸ್ತೆಗಳನ್ನು ಕಾಮಗಾರಿ ಸಂದರ್ಭ ಮುಚ್ಚುವುದಿಲ್ಲ, ಈ ಕುರಿತು ಸ್ಥಳೀಯರಲ್ಲಿ ಆತಂಕ ಬೇಡ ಎಂದು ನಳಿನ್ ಸ್ಪಷ್ಟಪಡಿಸಿ, ಅಧಿಕಾರಿಗಳಿಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು.

ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ, ನಾಯಕಿ ಸುಲೋಚನಾ ಜಿ.ಕೆ.ಭಟ್, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಪ್ರಮುಖರಾದ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಸ್ಥಳೀಯರಾದ ಫ್ರಾನ್ಸಿಸ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು. 

ಇದೇ ವೇಳೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸುದರ್ಶನ ಪುತ್ತೂರು ಸಂಸದರಿಗೆ ಬೇಡಿಕೆಗಳ ಪಟ್ಟಿ ಮಂಡಿಸಿ, ನೇರಳಕಟ್ಟೆಯಲ್ಲಿ ಪ್ಯಾಸೆಂಜರ್ ರೈಲು ಸಂಜೆ ನಿಲುಗಡೆ, ಫರಂಗಿಪೇಟೆ ಪೂರ್ಣಪ್ರಮಾಣದ ನಿಲ್ದಾಣ ಸಹಿತ ಹಲವು ವಿಚಾರಗಳನ್ನು ಮಂಡಿಸಿದರು.

 ರೈಲ್ವೆ ನಿಲ್ದಾಣ ಕುರಿತು ಸಾರ್ವಜನಿಕರ ಅಭಿಪ್ರಾಯದ ಪಟ್ಟಿಯನ್ನು ಬಂಟ್ವಾಳನ್ಯೂಸ್ ಪ್ರಕಟಿಸಿತ್ತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.