ಶನಿವಾರ ಮಧ್ಯಾಹ್ನ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ ಸಂಸದ, ಶಾಸಕ ಭೇಟಿ
ಹರೀಶ ಮಾಂಬಾಡಿ, ಬಂಟ್ವಾಳನ್ಯೂಸ್
ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ನಡೆಯುತ್ತಿರುವ ಆದರ್ಶ ರೈಲ್ವೆ ಯೋಜನೆಯಡಿ ಕಾಮಗಾರಿ ಪರಿಶೀಲನೆಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಯು.ರಾಜೇಶ್ ನಾಯ್ಕ್ ಶನಿವಾರ ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಲಿದ್ದಾರೆ. ರೈಲ್ವೆ ನಿಲ್ದಾಣ ಜನರಿಗೆ ಹತ್ತಿರವಾಗಬೇಕು, ಪೇಟೆ ಇನ್ನಷ್ಟು ಅಭಿವೃದ್ಧಿಯಾಗಬೇಕು ಎಂಬುದು ಸ್ಥಳೀಯರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿ ಬಂಟ್ವಾಳನ್ಯೂಸ್ ಜನಾಭಿಪ್ರಾಯಗಳನ್ನು ಆಧರಿಸಿ ರೈಲ್ವೆ ನಿಲ್ದಾಣವಷ್ಟೇ ಅಲ್ಲ, ಅದರ ಸುತ್ತಮುತ್ತ ಏನೇನಾಗಬೇಕಿದೆ ಎಂಬುದನ್ನು ಪಟ್ಟಿ ಮಾಡಿದೆ. ಏಕೆಂದರೆ ಜನರ ತೆರಿಗೆ ಹಣದಲ್ಲಿ ನಡೆಯುತ್ತಿರುವ ಸುಮಾರು 5.6 ಕೋಟಿ ರೂಗಳಷ್ಟು ವೆಚ್ಚದ ಕೆಲಸಗಳು ಸದುಪಯೋಗವಾಗಲಿ ಎಂಬುದಷ್ಟೇ ಇದರ ಸದಾಶಯ.
ಅದಕ್ಕೂ ಮುನ್ನ ಇಲ್ಲಿ ಏನೇನಾಗುತ್ತಿದೆ? ನೋಡೋಣ
- ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿ ಒಟ್ಟು ಎರಡು ಪ್ಲಾಟ್ ಫಾರ್ಮ್ ಗಳಿವೆ. ಪ್ರತಿಯೊಂದು ಪ್ಲಾಟ್ ಫಾರ್ಮ್ ಕೂಡ 600 ಮೀಟರ್ ಉದ್ದವಿರುವಂತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ.
- ಸುಮಾರು 26 ಬೋಗಿಗಳ ರೈಲು ಬಂದು ನಿಂತರೆ ಪ್ಲಾಟ್ ಫಾರ್ಮ್ ಪಕ್ಕದಲ್ಲೇ ಎಲ್ಲ ಬೋಗಿಗಳೂ ನಿಲ್ಲಲು ಸಾಧ್ಯ.
- ಇದರೊಂದಿಗೆ ಪ್ಲಾಟ್ ಫಾರ್ಮ್ ಗೆ ಮೇಲ್ಛಾವಣಿ, ವಿದ್ಯುದ್ದೀಪ, ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಶುದ್ಧೀಕರಿಸಿದ ಕುಡಿಯುವ ನೀರು, ಅಂಗವಿಕಲರಿಗೆ ವಿಶೇಷ ಶೌಚಗೃಹ, ಹೊಸ ಶೌಚಾಲಯ ಕಾಂಪ್ಲೆಕ್ಸ್ ರಚನೆಯಾಗಲಿದೆ.
- ಒಂದನೇ ಪ್ಲಾಟ್ ಫಾರ್ಮ್ ನಿಂದ ಎರಡನೇ ಪ್ಲಾಟ್ ಫಾರ್ಮ್ ಗೆ ಪ್ರಯಾಣಿಕರ ಪಾದಚಾರಿ ಮೇಲ್ಸೇತುವೆ ರಚನೆಯಾಗಲಿದೆ.
- ಪ್ಲಾಟ್ ಫಾರ್ಮ್ ಸುತ್ತಲೂ ಆವರಣಗೋಡೆ ನಿರ್ಮಾಣವಾಗುತ್ತಿದ್ದು, ಪಕ್ಕದಲ್ಲೇ ಹೂದೋಟ ನಿರ್ಮಿಸುವ ಯೋಜನೆ ಇದೆ.
ಏನಾಗಬೇಕು?
- ಇಲ್ಲಿ ಕನ್ನಡ ಬಲ್ಲ ಸಿಬ್ಬಂದಿ ಬೇಕು. ಇಲ್ಲಿಗೆ ಬರುವ ಪ್ರಯಾಣಿಕರೇ ವಿರಳ. ಬರುವವರನ್ನು ನಗುಮೊಗದಲ್ಲಿ ಮಾತನಾಡಿಸಿ, ಅವರಿಗೆ ಏನು ಬೇಕು ಎಂಬುದನ್ನು ವಿಚಾರಿಸುವ ತಾಳ್ಮೆ ಇರಬೇಕು.
- ಸಾಮಾನ್ಯವಾಗಿ ರಾತ್ರಿ ರೈಲು ಹತ್ತಲು ಬರುವವರಿಗೆ CONFUSE ಆಗುವುದು ತನ್ನ ಬೋಗಿ ಎಲ್ಲಿ ನಿಲ್ಲುತ್ತದೆ ಎಂದು. ಪ್ರತಿದಿನವೂ ರೈಲಿನ ಆಯಾ ಬೋಗಿಗಳು ಇಂತಿಂಥ ಜಾಗದಲ್ಲೇ ನಿಲ್ಲುತ್ತವೆ ಎಂಬುದು ಅಲ್ಲಿನ ಸಿಬ್ಬಂದಿಗೆ ಗೊತ್ತಿರುತ್ತದೆ. ಇಲ್ಲಿಗೆ ಬರುವ ಪ್ರಯಾಣಿಕರು ಹೆಚ್ಚೆಂದರೆ ಇಪ್ಪತ್ತು, ಇಪ್ಪತ್ತೈದು (ಅದೂ ಸೀಸನ್ ಗಳಲ್ಲಿ) ತಮ್ಮ ಬೋಗಿ ಎಲ್ಲಿ ನಿಲ್ಲುತ್ತದೆ ಎಂದು ಕೇಳಿದರೆ, ಅದೆಲ್ಲಾ ಗೊತ್ತಿಲ್ರೀ, ಬೇಕಾದರೆ ರೈಲು ಹತ್ತಿ, ಕಿರಿಕಿರಿ ಮಾಡಬೇಡಿ ಎಂದು ಮುಖ ಸಿಂಡರಿಸುವ ಬದಲು ಬೋಗಿ ನಿಲ್ಲುವ ಜಾಗ, ಕುಡಿಯುವ ನೀರಿರುವ ಸ್ಥಳ, ಶೌಚಾಲಯ ಇರುವ ಜಾಗದ ಬಗ್ಗೆ ತಾವೇ ವಿವರಿಸಿದರೆ, ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಬಹುದು.
- ಪ್ರತಿಯೊಬ್ಬ ಸಿಬ್ಬಂದಿಯೂ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರು ಇನ್ನೊಮ್ಮೆ ಬರುವಂತೆ ಮಾಡುವ PUBLIC RELATION OFFICER ಗಳಂತಾಗಬೇಕು.
- ಇಲ್ಲಿ ರೈಲು ಬರುವ ಹೊತ್ತಿಗೆ ಪ್ಲಾಟ್ ಫಾರ್ಮ್ ನಲ್ಲಿರುವ ಬೆಂಚು, ಆಸನಗಳಲ್ಲಿ ಪ್ರಯಾಣಿಕರಲ್ಲದವರು ಆಸೀನರಾಗಿರುತ್ತಾರೆ, ಎಲ್ಲಿಂದಲೋ ಬಂದು ಇಲ್ಲಿ ಕುಳಿತು ಹರಟೆ ಹೊಡೆಯುತ್ತಿರುತ್ತಾರೆ ಎಂಬ ಆರೋಪಗಳು ಕೇಳಿಬಾರದಂತೆ ನಿಗಾ ವಹಿಸಬೇಕು, ಇದಕ್ಕೆ ಕಡ್ಡಾಯವಾಗಿ RAILWAY POLICE ಕಾರ್ಯಾಚರಿಸಬೇಕು.
- ವಿಮಾನ ನಿಲ್ದಾಣಗಳಲ್ಲಿ ಸೆಕ್ಯೂರಿಟಿ ಚೆಕ್ ಇರುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಯಾರು ಬೇಕಾದರೂ ಬಂದು ಹೋಗಬಹುದು ಎಂಬಂಥ ಪರಿಸ್ಥಿತಿ ಇದೆ. ರೈಲು ಪ್ಲಾಟ್ ಫಾರ್ಮ್ ನಲ್ಲಿ ಪ್ರಯಾಣಿಕರು ಮತ್ತು ಪ್ರಯಾಣಿಕರನ್ನು ಬಿಡಲು ಬರುವವರು ಹೊರತುಪಡಿಸಿದರೆ, ಇನ್ಯಾರು ಇಲ್ಲದಂತೆ ನೋಡಿಕೊಳ್ಳಬೇಕು. ಸಿಬ್ಬಂದಿ ಕೊರತೆಯಾಗದಂತೆ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು.
- ರೈಲುಗಳಲ್ಲಿ ಬಂದಿಳಿಯುವ ಪ್ರಯಾಣಿಕರು ಬಿ.ಸಿ.ರೋಡ್ ಕಡೆಗೆ ಹೋಗಲು ರೈಲ್ವೆ ನಿಲ್ದಾಣ – ಲಯನ್ಸ್ ಸೇವಾ ಮಂದಿರ – ನಾರಾಯಣಗುರು ವೃತ್ತ – ಬಿ.ಸಿ.ರೋಡ್ ಮಾರ್ಗವನ್ನು ಬಳಸುತ್ತಾರೆ. ಈ ಭಾಗ ನಿರ್ಜನವಾಗಿದ್ದು, ಬೆಳಗ್ಗೆ 4.30ಕ್ಕೆ ರೈಲಿಂದಿಳಿಯುವುದು ಅಥವಾ ರಾತ್ರಿ 9 ಗಂಟೆಗೆ ರೈಲು ಹತ್ತಲು ಬರುವುದು ಕಷ್ಟ. ಈ ದಾರಿಯಲ್ಲಿ ವಿದ್ಯುದ್ದೀಪಗಳು ಇರುವಂತೆ ಮಾಡಬೇಕು. ಆದರೆ ಇದಕ್ಕಿಂತ ಹತ್ತಿರ ಮತ್ತು ಜನಸಂಚಾರ ಇರುವ ಎರಡನೇ ಪ್ಲಾಟ್ ಫಾರ್ಮ್ ಬದಿಯಿಂದ ಬಿ.ಸಿ.ರೋಡಿಗೆ ಕೇವಲ 600 ಮೀಟರ್ ನಷ್ಟೇ ದೂರವಿರುವ ಬಿ.ಸಿ.ರೋಡ್ – ಕೈಕುಂಜೆ (ಬಿಇಒ ಕಚೇರಿ ಬಳಿ) ಮಾರ್ಗವನ್ನು ಅವಲಂಬಿಸಬಹುದು. ಇದು ನಡೆದುಕೊಂಡು ಹೋಗಲೂ ಅನುಕೂಲ ಮತ್ತು ಸೇಫ್ ರಸ್ತೆ.
- ರೈಲ್ವೆ ಸೇತುವೆಯಲ್ಲಿ ನಡೆದುಕೊಂಡು ಹೋಗಲು ಹಳಿಯ ಬಳಿಯಲ್ಲಿ ಶೀಟ್ ಗಳನ್ನು ಹಾಕಿ ವ್ಯವಸ್ಥೆ ಮಾಡಲಾಗಿತ್ತು. ಇದು ಸ್ಥಳೀಯರು ಬಿ.ಸಿ.ರೋಡ್ – ನಂದಾವರಕ್ಕೆ ತೆರಳಲು ಅನುಕೂಲವಾಗುವ ಮಾರ್ಗ. ರೈಲ್ವೆ ಸಿಬ್ಬಂದಿಗೆ ಮಾತ್ರ ಈ ದಾರಿ ಎಂದು ಹೇಳಲಾಗುತ್ತಿದ್ದರೂ ಸ್ಥಳೀಯರು ಸೇಫ್ ಆಗಿ ಹೋಗಲು ಇಲ್ಲಿ ಕಾಲಿಡುವ ಜಾಗದಲ್ಲಿ ಕಬ್ಬಿಣದ ಮುಚ್ಚಳಗಳು ಕಿತ್ತು ಹೋಗಿವೆ. ಇದನ್ನು ಸರಿಪಡಿಸಬೇಕು. ಇದನ್ನು ಹಾಳುಗೆಡದಂತೆ ನೋಡಿಕೊಳ್ಳಬೇಕು.
- PAID PARKING ವ್ಯವಸ್ಥೆ ಇರಬೇಕು. ವಾಹನಗಳನ್ನಿಟ್ಟರೆ ಅವು ಸುರಕ್ಷಿತವಾಗುವಂತೆ ವ್ಯವಸ್ಥೆಗಳಿರಬೇಕು.
- ತತ್ಕಾಲ್ ಬುಕ್ಕಿಂಗ್ ಸಂದರ್ಭ ಮಧ್ಯವರ್ತಿಗಳದ್ದೇ ಹಾವಳಿ ಜಾಸ್ತಿ ಇರುತ್ತದೆ ಎಂದು ಸಾರ್ವಜನಿಕರು ದೂರುತ್ತಾರೆ. ಇಂಥ ಸನ್ನಿವೇಶಗಳು ನಿರ್ಮಾಣವಾಗದಂತೆ ಎಚ್ಚರವಹಿಸಬೇಕು.
- ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಕಡ್ಡಾಯಗೊಳಿಸಬೇಕು.