ಐದು ಜಾನುವಾರುಗಳ ಸಾವು, ಆರೋಪಿಗಳು ಪರಾರಿ ಹಿಂದು ಸಂಘಟನೆಯಿಂದ ಪ್ರತಿಭಟನೆ
ಆ ಕಾರು ಐಶಾರಾಮಿ ಇಕೋಸ್ಫೋರ್ಟ್. ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ಸನ್ಯಾಸಿಕಟ್ಟೆಯಲ್ಲಿ ಅಪಘಾತವಾಗದೇ ಇದ್ದರೆ ಅದರಲ್ಲಿ ಯಾರಿದ್ದರು ಎಂಬುದು ಗೊತ್ತೇ ಆಗುತ್ತಿರಲಿಲ್ಲ. ಆದರೆ ಬೆಳಗ್ಗೆ ಅಪಘಾತವಾದ ಸಂದರ್ಭ ವಾಹನದಿಂದ ಹೊರಬಿದ್ದದ್ದು ಆರು ಜಾನುವಾರುಗಳು. ಇವುಗಳ ಪೈಕಿ 5 ದಾರುಣವಾಗಿ ಮೃತಪಟ್ಟಿದ್ದವು ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಕಾರು ಕಮರಿಗೆ ಉರುಳುತಿದ್ದಂತೆ ಕಾರಿನಲ್ಲಿದ್ದ ಅಕ್ರಮ ಗೋ ಸಾಗಾಟಗಾರರು ಪರಾರಿಯಾಗಿದ್ದು ಕಾರು ಸಂಪೂರ್ಣ ನಜ್ಜು ನುಜ್ಜಾಗಿದೆ.
ಸನ್ಯಾಸಿಕಟ್ಟೆ ತಿರುವು ರಸ್ತೆಯಲ್ಲಿ ಗುಂಡಿಗೆ ಬಿದ್ದಾಗ ಒಂದು ಜಾನುವಾರು ಬದುಕಿತ್ತು. ಕಾರಿನ ನೊಂದಣಿ ಸಂಖ್ಯೆಯನ್ನು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ನೊಂದಣಿ ಸಂಖ್ಯೆಯು ನಕಲಿ ಎಂದು ಪತ್ತೆಯಾಯಿತು.
ಬಂಧನಕ್ಕೆ ತಂಡ:
ಆರೋಪಿಗಳನ್ನು ದಸ್ತಗಿರಿ ಮಾಡಲೀಗ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲು ಅದಾವತ್ ನೇತೃತ್ವದಲ್ಲಿ ಬೆಳ್ತಂಗಡಿ ವೃತ್ತನಿರೀಕ್ಷಕರು ಮತ್ತು ವೇಣೂರು ಪೊಲೀಸ್ ಠಾಣಾ ಉಪನಿರೀಕ್ಷಕರನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು ತನಿಖೆ ಸಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕನಾಟಕ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ ಪ್ರಾಣಿ ಹಿಂಸೆ ನಿಷೇಧ ಕಾಯ್ದೆ ಯಂತೆ ಪ್ರಕರಣದ ದಾಖಲಾಗಿದೆ.
ಚಾರ್ಮಾಡಿ ಚಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ನಡೆದೇ ಇಲ್ಲವೇ ಎಂಬ ಶಂಕೆಯನ್ನೂ ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ಅಥವಾ ಇನ್ಯಾವುದಾದರೂ ಅಕ್ರಮ ಚಟುವಟಿಕೆಗಳು ನಡೆಯುತಿದ್ದರೂ ಯಾರಿಗೂ ಗೊತ್ತಾಗಲಿಕ್ಕಿಲ್ಲ ಎಂಬ ಸಂಗತಿಯೇ ಆಘಾತಕಾರಿಯಾಗಿದೆ.
ಹಿಂದೂ ಸಂಘಟನೆಗಳಿಂದ ಪ್ರತಿಭಟನೆ
ಶುಕ್ರವಾರ ಮುಂಜಾನೆ ವೇಳೆ ಕಾರಿನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತಿದ್ದ ವೇಳೆ ಕಾರು ಕಮರಿಗೆ ಉರುಳಿ ಗೋವುಗಳು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಚಾರ್ಮಾಡಿ ಚಕ್ ಪೋಸ್ಟ್ ನಲ್ಲಿ ಭಧ್ರತಾ ವೈಫಲ್ಯವಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಚಾರ್ಮಾಡಿ ಚಕ್ ಪೋಸ್ಟ್ ಬಳಿ ಪ್ರತಿಭಟನೆ ನಡೆಸಿದರು.