ಕಳೆದ ೨೦ ವರ್ಷಗಳ ಹಿಂದೆ ಸ್ಥಳೀಯ ನಾಗರಿಕರ ಉತ್ಸಾಹದಲ್ಲಿ ಆರಂಭಗೊಂಡ ಹೆಂಚಿನ ಮಾಡಿನ ಶಾಲೆ ಇದೀಗ ಸುಸಜ್ಜಿತ ಕಾಂಕ್ರೀಟು ಕಟ್ಟಡ ಹೊಂದಿದ್ದರೂ ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಇಲ್ಲಿನ ನಾಗರಿಕರು ಕೈ ಜೋಡಿಸಬೇಕು ಎಂದು ನಿವೃತ್ತ ಮುಖ್ಯಶಿಕ್ಷಕ, ಪ್ರಗತಿಪರ ಕೃಷಿಕ ವಿನಯ ಕುಮಾರ್ ಜೈನ್ ಹೇಳಿದ್ದಾರೆ.
ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಭಾಕರ ಪ್ರಭು ಪುಸ್ತಕ ವಿತರಿಸಿ ಮಾತನಾಡಿ, ಸರ್ಕಾರಿ ಶಾಲೆ ಎಂಬ ಕೀಳರಿಮೆ ತೊರೆದು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸುವ ಮೂಲಕ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಆ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸಿದಾಗ ಅವರಲ್ಲಿ ಕೌಶಲ್ಯ ವೃದ್ಧಿಸಬಹುದು ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಎಸ್.ಪಿ.ಶ್ರೀಧರ ಮತ್ತು ದಾನಿ ರಾಮಮೋಹನ್ ಶೆಟ್ಟಿ ಎಣ್ಮಾಜೆ ಮಾತನಾಡಿ, ಶಾಲೆಗೆ ಆವರಣಗೋಡೆ, ಕುಡಿಯುವ ನೀರಿನ ಸೌಲಭ್ಯ ಅಗತ್ಯವಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಲೋಚನಾ, ಅಂಗನವಾಡಿ ಕಾರ್ಯಕರ್ತೆ ಹೇಮಾವತಿ, ಪ್ರಮುಖರಾದ ಸುರೇಶ ಸಾಲ್ಯಾನ್, ರಾಜೇಶ ಸಾಲ್ಯಾನ್ ಮತ್ತಿತರರು ಇದ್ದರು.
ಇದೇ ವೇಳೆ ಉದ್ಯಮಿ ಸಂದೇಶ ಶೆಟ್ಟಿ ಪೊಡುಂಬ ಮತ್ತಿತರ ದಾನಿಗಳು ನೀಡಿದ ಉಚಿತ ಬರೆಯುವ ಪುಸ್ತಕ ಬ್ಯಾಗ್, ಕೊಡೆ, ಗುರುತಿನ ಚೀಟಿ, ನೀರಿನ ಬಾಟಲು ಮತ್ತಿತರ ಸಾಮಾಗ್ರಿ ವಿತರಿಸಲಾಯಿತು.
ಮುಖ್ಯಶಿಕ್ಷಕಿ ವಿನುತಾ ಅರ್ಕುಳ ಸ್ವಾಗತಿಸಿ, ಸಹಶಿಕ್ಷಕಿ ನಾಗವೇಣಿ ವಂದಿಸಿದರು. ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.