ಹಸಿರು ಉಳಿಸುವ ಮೂಲಕ ಪರಿಸರವನ್ನು ಕಾಯ್ದುಕೊಳ್ಳುವ ಕೆಲಸ ನಿರಂತರವಾಗಿ ನಡೆಯಬೇಕು. ಗಿಡಗಳನ್ನು ನೆಡುವುದು ಮಾತ್ರವಲ್ಲ ಅದನ್ನು ಉಳಿಸಿ ರಕ್ಷಿಸಿಕೊಂಡು ಬರುವುದು ಕೂಡಾ ಅವಶ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಮಹಮ್ಮದ್ ಇಮ್ತಿಯಾಜ್ ಅಹ್ಮದ್ ಹೇಳಿದರು.
ಬಿ.ಸಿ.ರೋಡ್ ಪರ್ಲಿಯ ಸರಕಾರಿ ವಸತಿ ಗೃಹದ ವಠಾರದಲ್ಲಿ ಅರಣ್ಯ ಇಲಾಖೆ, ತಾ| ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪರ್ಲಿಯ ಸರಕಾರಿ ವಸತಿ ಗೃಹದ ವಠಾರದಲ್ಲಿ ಗಿಡವನ್ನು ನೆಟ್ಟ ಅವರು ಅದಕ್ಕೆ ನೀರು ಹಾಕುವ ಮೂಲಕ ಮುಂದಕ್ಕೆ ನೀವು ಎಲ್ಲರೂ ಬೇಸಿಗೆಯಲ್ಲಿ ನೀರು ಉಣಿಸಿ ಗಿಡಗಳನ್ನು ರಕ್ಷಿಸಿ, ಒಂದೆರಡು ವರ್ಷದ ಬಳಿಕ ಅದು ನಿಮಗೆ ನೆರಳನ್ನು, ಹಣ್ಣನ್ನು , ಮಣ್ಣಿಗೆ ಸತ್ವವನ್ನು ನೀಡುವ ಒಣಗಿದ ಎಲೆಯನ್ನು ನೀಡುವುದು. ತಾನು ಸತ್ತ ಬಳಿಕ ಉರುವಳನ್ನು ನೀಡುವುದು ಎಂದು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ರಮ್ಯಾ ಎಚ್.ಆರ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶಿಲ್ಪ ಜಿ.ತಿಮ್ಮಾಪುರ್, ವಲಯ ಅರಣ್ಯಾಧಿಕಾರಿ ಸುರೇಶ್, ವಕೀಲರ ಸಂಘದ ಉಪಾಧ್ಯಕ್ಷ ಚಂದ್ರಶೇಖರ್ ರಾವ್ ಪುಂಚಮೆ, ಸಹಾಯಕ ಸರಕಾರಿ ನ್ಯಾಯವಾದಿ ಸತೀಶ್ ಕುಮಾರ್ ಶಿವಗಿರಿ, ನ್ಯಾಯವಾದಿ ಸತೀಶ್ ಬಿ., ಉಪವಲಯಯ ಅರಣ್ಯಾಧಿಕಾರಿ ಯಶೋಧರ, ಅನಿಲ್, ಪ್ರೀತಮ್, ಕ್ಯಾರಲ್ ಮೊಂತೆರೋ, ಹಿತೇಶ್, ವಿನಯ್ ಮತ್ತು ವಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು.