ಸರಪಾಡಿಯಲ್ಲಿರುವ ಎಂಆರ್ ಪಿಎಲ್ ಡ್ಯಾಂನಲ್ಲಿ ನೀರು ಶೇಖರಣೆಗೊಂಡಿದ್ದರೂ ಹರಿವಿಗೆ ನದಿಯಲ್ಲಿ ಹೂಳು ಸಮಸ್ಯೆಯಾಗಿದೆ. ಇದನ್ನು ನಿವಾರಿಸಿದರೆ, ಬಂಟ್ವಾಳದಲ್ಲಿರುವ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಹೇಳಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅವರು ಅಧಿಕಾರಿಗಳ ತಂಡದೊಂದಿಗೆ ಮಂಗಳವಾರ ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿರುವ ಜಾಕ್ ವೆಲ್, ಎಂಆರ್‌ಪಿಎಲ್ ಸರಪಾಡಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿ, ನೀರಿನ ಲಭ್ಯತೆ ಹಾಗೂ ಅದನ್ನು ಕೆಳಭಾಗಕ್ಕೆ ಹರಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬಂಟ್ವಾಳದ ಜನರು ನೀರಿನ ಸಮಸ್ಯೆಯ ಬಗ್ಗೆ ಚಿಂತಿತರಾಗಬೇಕಾಗಿಲ್ಲ. ನೀರಿನ ಗಂಭೀರ ಸಮಸ್ಯೆ ಇಲ್ಲಿಲ್ಲ. ಮಿತಬಳಕೆ ಮಾಡಿದರಷ್ಟೇ ಸಾಕು, ಇನ್ನೊಂದು ಹದಿನೈದು ದಿನಗಳಿಗಾಗುವಷ್ಟು ನೀರು ಇಲ್ಲಿದೆ ಎಂದು ಬಂಟ್ವಾಳ ಶಾಸಕ ಯು.ರಾಜೇಶ್ ನಾಯ್ಕ್ ಈ ಸಂದರ್ಭ ಸುದ್ದಿಗಾರರಿಗೆ ತಿಳಿಸಿದರು.
ಕಳೆದ ಕೆಲವು ದಿನಗಳಿಂದ ಘಟ್ಟ ಪ್ರದೇಶಗಳಲ್ಲಿ ಸ್ವಲ್ಪ ಮಳೆಯಾದ ಪರಿಣಾಮ ಕುಮಾರಧಾರ ನದಿಯ ಮೂಲಕ ನೀರಿನ ಹರಿವು ಕೊಂಚ ಆರಂಭಗೊಂಡಿದ್ದು, ಆದರೆ ಅದು ಎಂಆರ್‌ಪಿಎಲ್ ಡ್ಯಾಂನಲ್ಲಿ ಸ್ಟಾಕ್‌ಗೊಂಡಿದೆ. ಹೀಗಾಗಿ ಅಲ್ಲಿನ ಮರಳನ್ನು ಡ್ರಜ್ಜಿಂಗ್ ಯಂತ್ರದ ಮೂಲಕ ತೆರವುಗೊಳಿಸಿದರೆ ನೀರಿನ ಸಮಸ್ಯೆಗೆ ಪರಿಹಾರ ದೊರಕಬಹುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕಮೀಷನರ್ ರವಿಚಂದ್ರನಾಯಕ್, ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿಸೋಜ, ಇಂಜಿನಿಯರ್ ಡೊಮಿನಿಕ್ ಡಿ.ಮೆಲ್ಲೊ, ಪುರಸಭಾ ಸದಸ್ಯ ಎ. ಗೋವಿಂದ ಪ್ರಭು, ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ. ದೇವದಾಸ ಶೆಟ್ಟಿ, ಪ್ರಮುಖರಾದ ರಮಾನಾಥ ರಾಯಿ, ಪವನ್ ಕುಮಾರ್ ಶೆಟ್ಟಿ, ಮಂಜು ಮತ್ತಿತರರು ಉಪಸ್ಥಿತರಿದ್ದರು.