ಬಿ.ಸಿ.ರೋಡಿನ ಹೃದಯ ಭಾಗವಾದ ಸ್ಟೇಟ್ ಬ್ಯಾಂಕ್ ಮುಂಭಾಗ ನೀರು ನಿಲ್ಲುವುದು ಹಾಗೂ ಚರಂಡಿ ದುರಸ್ತಿಗೊಳಿಸದೇ ಇರುವುದನ್ನು ವಿರೋಧಿಸಿ ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನು ಚಾಲಕರ ಸಂಘದ ವತಿಯಿಂದ ಶನಿವಾರ ಬಿ.ಸಿ.ರೋಡ್ ಸ್ಟೇಟ್ ಬ್ಯಾಂಕ್ ಎದುರು ಪ್ರತಿಭಟನೆ ಧರಣಿ ನಡೆಯಿತು.
ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ಬಿ.ಸಿ.ರೋಡ್ ಜನನಿಬಿಡ ಪ್ರದೇಶವಾಗಿದ್ದು, ಇದು ತಾಲೂಕಿನ ಕೇಂದ್ರ ಸ್ಥಳವೂ ಆಗಿದೆ. ತಾಲೂಕು ದಂಡಾಧಿಕಾರಿ ಕಚೇರಿ, ನ್ಯಾಯಾಲಯ, ಪೊಲೀಸ್ ಠಾಣೆ, ತಾಲೂಕು ಪಂಚಾಯತ್ ಕೇರಿ, ವಾಣಿಜ್ಯ ಬ್ಯಾಂಕುಗಳು ಇದ್ದು, ಮೂಲಸೌಕರ್ಯವಾದ ಸುಗಮ ಸಂಚಾರಕ್ಕೆ ರಸ್ತೆಯಾಗಲೀ, ಮಳೆ ನೀರು ಹರಿದುಹೋಗಲು ಸರಿಯಾದ ಒಳಚರಂಡಿ ವ್ಯವಸ್ಥೆಯಾಗಲೀ ಇಲ್ಲ. ಪ್ರಯಾಣಿಕರಿಗೆ ಅನುಕೂಲವಾಗುವ ಬಸ್ ನಿಲ್ದಾಣ, ವಾಹನಗಳ ಪಾರ್ಕಿಂಗ್ ಗೆ ಸರಿಯಾದ ಸ್ಥಳಗಳೂ ಇಲ್ಲಿಲ್ಲ. ಸ್ವಚ್ಛ ಭಾರತ ನೆಪದಲ್ಲಿ ನಾಗರಿಕರಿಂದ ಅಧಿಕ ತೆರಿಗೆ ವಸೂಲು ಮಾಡುವ ಪುರಸಭೆ, ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ವಿಫಲವಾಗಿದೆ ಎಂದರು.
ಬಿ.ಸಿ.ರೋಡ್ ಸ್ಟೇಟ್ ಬ್ಯಾಂಕ್ ಎದುರಿನಲ್ಲಿರುವ ಟೂರಿಸ್ಟ್ ಕಾರು ಪಾರ್ಕಿಂಗ್ ಪಕ್ಕದಲ್ಲಿರುವ ಚರಂಡಿ ದುರಸ್ತಿಗೊಳಿಸಲು ಸಂಘ ಹಲವಾರು ಬಾರಿ ಪುರಸಭೆ ಮುಖ್ಯಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ತಹಶೀಲ್ದಾರ್ ಅವರಿಗೆ ದೂರು ನೀಡಿದರೂ ಉಪಯೋಗಶೂನ್ಯ. ಹೀಗಾಗಿ ಚಾಲಕರ ಸಂಘ ಪ್ರತಿಭಟನೆಯನ್ನು ನಡೆಸಬೇಕಾಯಿತು ಎಂದರು.
ಬಿ.ಸಿ.ರೋಡಿನಲ್ಲಿ ಸಂಚರಿಸುವ ನಾಗರಿಕರಿಗೆ ಇಲ್ಲಿ ಯಾವುದೇ ಸೌಕರ್ಯಗಳೂ ಇಲ್ಲ. ತೆರೆದ ಚರಂಡಿ, ಒಳ ಚರಂಡಿ, ಸರ್ವೀಸ್ ರೋಡ್, ವಾಹನ ನಿಲುಗಡೆ, ಪಾದಾಚಾರಿಗಳ ಸಂಚಾರ ವ್ಯವಸ್ಥೆ ಈ ಪೇಟೆಯಲ್ಲಿಲ್ಲ. ಪುರಸಭೆ, ತಾಲೂಕಾಡಳಿತದಿಂದ ಸಂಪೂರ್ಣ ನಿರ್ಲಕ್ಷ್ಯತೆಗೆ ಒಳಗಾದ ಪೇಟೆಯನ್ನು ವ್ಯವಸ್ಥಿತಗೊಳಿಸಲು ಜಿಲ್ಲಾಡಳಿತ ತಕ್ಷಣ ಸ್ಪಂದಿಸಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು, ಸಂಘದ ಅಧ್ಯಕ್ಷ ವಿಠಲ ರೈ ಮಧ್ವಗುತ್ತು, ಸಂಚಾಲಕ ಕೃಷ್ಣ ಅಲ್ಲಿಪಾದೆ, ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕುಲಾಲ್ ದೈಪಲ, ಪ್ರಮುಖರಾದ ಪ್ರಭಾಕರ ದೈವಗುಡ್ಡೆ, ಕೆ.ಎಚ್.ಅಬೂಬಕ್ಕರ್ ಉಪಸ್ಥಿತರಿದ್ದರು.