ದೇವಸ್ಥಾನ, ಚರ್ಚ್, ಮಸೀದಿಗೆ ತೆರಳಿ ನಾವು ಪ್ರಾರ್ಥಿಸುತ್ತೇವೆ. ಅದೇ ರೀತಿ ಶಾಲೆಯೂ ವಿದ್ಯಾದೇಗುಲ. ಇಲ್ಲಿ ಸರ್ವಧರ್ಮೀಯರೂ ಆಗಮಿಸಿ ವಿದ್ಯಾವಂತರಾಗುತ್ತಾರೆ, ಶಾಲೆ ಎಂಬ ವಿದ್ಯಾದೇಗುಲ ಅಭಿವೃದ್ಧಿಗೆ ಸರ್ವರ ಸಹಕಾರ ಅಗತ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಕಲ್ಲಡ್ಕದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಲ್ಲಡ್ಕ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆಂಗ್ಲ ಮಾಧ್ಯಮ ವಿಭಾಗವನ್ನು ಉದ್ಘಾಟಿಸಿ, ಶಾಲೆಯ ಶತಮಾನೋತ್ತರ ಬೆಳ್ಳಿಹಬ್ಬದ ಮುನ್ನೋಟವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವಿದ್ಯಾದೇಗುಲ ಅಭಿವೃದ್ಧಿಪಡಿಸುವ ಕಾರ್ಯ ನಡೆಯಬೇಕು. ಆಂಗ್ಲ ಮಾಧ್ಯಮ ಶಿಕ್ಷಣ ಕಲಿಕೆ ಇಂದು ಅನಿವಾರ್ಯವಾಗಿದ್ದು, ಹಳ್ಳಿಯ ಮಕ್ಕಳೂ ಉನ್ನತ ವಿದ್ಯಾಭ್ಯಾಸ ನಡೆಸಲು ಉಪಕಾರಿಯಾಗುತ್ತದೆ. ಸರಕಾರ ಆಂಗ್ಲ ಮಾಧ್ಯಮ ಕಲಿಕೆಗೆ ಉತ್ತೇಜನ ನೀಡಿದ ಹಿನ್ನೆಲೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪದೆ, ಮತ್ತೆ ಗತವೈಭವ ಇತಿಹಾಸ ನೆನಪಿಸುವಂತೆ ಮಾಡುತ್ತದೆ. ಕಲ್ಲಡ್ಕದ ಈ ಶಾಲೆಗೆ ಶಾಸಕರ ನಿಧಿಯಿಂದ ಅಭಿವೃದ್ಧಿಗೆ ನೆರವು ನೀಡುವುದಾಗಿ ತಿಳಿಸಿದರು.
ಇದೇ ವೇಳೆ ದಾನಿಗಳ ಸಹಕಾರದಿಂದ ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿಯ ಕೊಡುಗೆಯಾದ 3 ಲಕ್ಷ ರೂ ಮೌಲ್ಯದ ಪೀಠೋಪಕರಣದ ಸ್ವೀಕಾರ ಮತ್ತು ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ಕೊಡುಗೆಯಾದ ಲ್ಯಾಪ್ ಟಾಪ್, ಪ್ರಾಜೆಕ್ಟರ್ ಸ್ವೀಕಾರ ಕಾರ್ಯಕ್ರಮ ನಡೆಯಿತು.
ಶಾಲೆಯ ಹಿರಿಯ ವಿದ್ಯಾರ್ಥಿಯೂ ಆಗಿರುವ ಶತಮಾನೋತ್ತರ ಬೆಳ್ಳಿಹಬ್ಬದ ಗೌರವ ಸಲಹೆಗಾರ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಆಳ್ವ, ಹಿರಿಯ ವಿದ್ಯಾರ್ಥಿಗಳೂ ಆಗಿರುವ ದಾನಿಗಳಾದ ಹೋಟೆಲ್ ಲಕ್ಷ್ಮೀಗಣೇಶ್ ನ ರಾಜೇಂದ್ರ ಹೊಳ್ಳ, ಹೋಟೆಲ್ ಲಕ್ಷ್ಮೀನಿವಾಸದ ಶಿವರಾಮ ಹೊಳ್ಳ, ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮೀ, ಶತಮಾನೋತ್ತರ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ನಾಗೇಶ್ ಕೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಡಾ ಸುರೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಜೇಶ್ ಕೊಟ್ಟಾರಿ ಕೆ, ಗ್ರಾಮ ಪಂಚಾಯತ್ ಸದಸ್ಯೆ ಆಯಿಷಾ, ಶಿಕ್ಷಣ ಸಂಯೋಜಕಿ ಸುಶೀಲಾ, ಸಮಿತಿ ಉಪಾಧ್ಯಕ್ಷ ಶಿವಶಂಕರ್ ಭಟ್, ಬೀಡಿ ಉದ್ಯಮಿ ಮಹಮ್ಮದ್ ಶಾಫಿ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಿಇಒ ಸುರೇಶ್ ಆಚಾರ್ಯ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದ ಶಾಲಾ ಮುಖ್ಯ ಶಿಕ್ಷಕ ಅಬೂಬಕರ್ ಅಶ್ರಫ್ ಶಾಲೆ ನಡೆದುಬಂದ ದಾರಿಯನ್ನು ವಿವರಿಸಿದರು. ಶಾಲೆಯಲ್ಲೀಗ 224 ಮಂದಿ ವಿದ್ಯಾರ್ಥಿಗಳು ಒಂದರಿಂದ 8ನೇ ತರಗತಿವರೆಗೆ ಕಲಿಯುತ್ತಿದ್ದು, ಎಲ್.ಕೆ.ಜಿ., ಯು.ಕೆ.ಜಿ. ಆರಂಭಗೊಂಡ ಮೇಲೆ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಇದಕ್ಕೆ ಪೋಷಕರ ಸಹಕಾರ ಕಾರಣ ಎಂದವರು ತಿಳಿಸಿದರು. ಶಿಕ್ಷಕಿ ಸಂಗೀತಾ ಕಾರ್ಯಕ್ರಮ ನಿರ್ವಹಿಸಿದರು.ಹಿರಿಯ ಶಿಕ್ಷಕಿ ವಾರಿಜಾಕ್ಷಿ ವಂದಿಸಿದರು.