ಬಂಟ್ವಾಳ: ಸುರಿಬೈಲು ಆಂಗ್ಲ ಮಾಧ್ಯಮ ಶಾಲೆಯನ್ನು ಸ್ಮಾಟ್ ಸ್ಕೂಲ್ ಮಾಡಲು ಈಗಾಗಲೇ ಚಿಂತನೆ ನಡೆಸಲಾಗಿದ್ದು, ಮಕ್ಕಳ ಕಲಿಕೆಯ ಗುಣಮಟ್ಟವನ್ನು ಮತ್ತಷ್ಟು ಪರಿಣಾಮಗೊಳಿಸಲು ಈ ಯೋಜನೆ ಅನುಕೂಲವಾಗಲಿದೆ ಎಂದು ಕೊಳ್ನಾಡು ಗ್ರಾ. ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹೇಳಿದರು.
ಸುರಿಬೈಲು ಸರಕಾರಿ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತಾಡಿದ ಅವರು ಸಮುದಾಯ ಶೈಕ್ಷಣಿಕವಾಗಿ ಜಾಗ್ರತೆಗೊಂಡಾಗ ಮಾತ್ರ ಶಾಲೆಗಳು ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮವನ್ನು ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್ ಉದ್ಘಾಟಿಸಿ ಮಾತನಾಡಿ, ಮಕ್ಕಳನ್ನು ದುಬಾರಿ ವೆಚ್ಚ ವ್ಯಯಿಸಿ ಇಂಗ್ಲಿಷ್ ಶಾಲೆಗೆ ಕಳುಹಿಸುವ ಪೋಷಕರು ಇಂದು ಗುಣಮಟ್ಟದ ಶಿಕ್ಷಣವನ್ನು ನಿರೀಕ್ಷಿಸಲು ಅಸಾಧ್ಯವಾಗಿದೆ. ಖಾಸಗಿ ಶಾಲೆಯನ್ನು ಮೀರಿಸುವ ಸರಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಆಂದೋಲನ ನಡಿಬೇಕಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುಲೇಮಾನ್ ಅಪೋಲೋ, ಶಾಲಾ ಮುಖ್ಯ ಶಿಕ್ಷಕ ಗೋಪಾಲ, ಗ್ರಾ. ಪಂ. ಸದಸ್ಯೆ ಜಯಂತಿ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಕೆ. ಹ್ಯಾರಿಸ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಫಾರೂಕ್ ಬಂಟ್ವಾಳ, ಕೇಂದ್ರದ ಉಪಾಧ್ಯಕ್ಷೆ ಆಸ್ಯಮ್ಮ ಉಪಸ್ಥಿತರಿದ್ದರು.
ಮಕ್ಕಳನ್ನು ಬಲೂನ್, ಪಠ್ಯ ಪುಸ್ತಕ, ನೋಟು ಪುಸ್ತಕ, ಬ್ಯಾಗು ಕೊಟ್ಟು ಸ್ವಾಗತಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಸದಸ್ಯರು, ಪೋಷಕರು ಈ ಸಂದರ್ಭ ಹಾಜರಿದ್ದರು. ಶಾಲಾದತ್ತು ಸಮಿತಿ ಅಧ್ಯಕ್ಷ ಎಸ್. ಎಂ. ಅಬೂಬಕ್ಕರ್ ಸ್ವಾಗತಿಸಿ, ಪ್ರಸ್ತಾವನೆ ಸಲ್ಲಿಸಿದರು. ಶಿಕ್ಷಕಿ ನೀರಜ ವಂದಿಸಿದರು. ದೈಹಿಕ ಶಿಕ್ಷಕ ಶಿವ ಪ್ರಸಾದ್ ಶೆಟ್ಟಿ ನಿರೂಪಿಸಿದರು.