ಬಂಟ್ವಾಳ ತಾಲೂಕಿನ ಕಲ್ಲಡ್ಕ- ಮಾಣಿ ರಾಷ್ಟ್ರೀಯ ಹೆದ್ದಾರಿ ನಡುವಿನ ಸೂರಿಕುಮೇರು ಸಮೀಪದ ಬರಿಮಾರು ಕಡವಿನಬಳಿ ಎಂಬಲ್ಲಿ ಶನಿವಾರ ಸಂಜೆ ನಡೆದ ಘಟನೆಯಲ್ಲಿ ಸ್ನಾನಕ್ಕಿಳಿದ ಕುಂಬಳೆ ಸಮೀಪದ ತಂಡವೊಂದರ ಪೈಕಿ ಇಬ್ಬರು ಮೃತಪಟ್ಟಿದ್ದಾರೆ.
ಬರಿಮಾರು ಗ್ರಾಮದ ಸಂಜೀವ್ ಭೋವಿ ಎಂಬುವರ ಮಗನ ಮದುವೆಗೆ ಆಗಮಿಸಿದ್ದ ಅವರ ದೂರದ ಸಂಬಂಧಿಯಾಗಿರುವ ಕೇರಳದ ಕುಂಬಳೆಯ ಕೊಯಿಪ್ಪಾಡಿಯ ಅಜಿತ್ ಕುಮಾರ್ (40) ಹಾಗೂ ಕುಂಬಳೆ ನಾಯ್ಕಾಪು ನಿವಾಸಿ ಮನೀಷ್ (14) ಮೃತಪಟ್ಟವರು. ಇನ್ನೋರ್ವ ಯಕ್ಷಿತ್ (13) ಎಂಬಾತ ಅಪಾಯದಿಂದ ಪಾರಾಗಿದ್ದು, ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಜೀವ ಬೋವಿ ಅವರ ಮನೆಗೆ ಬಂದಿದ್ದ ಕುಂಬಳೆಯಲ್ಲಿ ಕಲಾವಿದರ ಸಂಘ ನಡೆಸುತ್ತಿದ್ದ ಅಜಿತ್ ತನ್ನೊಂದಿಗೆ ಏಳು ಮಂದಿ ಮಕ್ಕಳನ್ನು ಕರೆದುಕೊಂಡು ಮದುವೆ ಸಂಭ್ರಮಕ್ಕೆ ಬಂದಿದ್ದು, ಶನಿವಾರ ಸಂಜೆ ನೇತ್ರಾವತಿ ಬಳಿಯಲ್ಲಿ ಈಜಲು ತೆರಳಿದ್ದಾರೆ. ಮನೀಷ್ ಮತ್ತು ಯಕ್ಷಿತ ಮುಳುಗುವುದು ಕಂಡು ಅಜೀತ್ ರಕ್ಷಣೆಗೆ ಧುಮುಕಿದ್ದಾರೆ. ಇದನ್ನು ನೋಡಿ ಸ್ಥಳೀಯ ಈಜುಗಾರ ಕೇಶವ ಬರಿಮಾರು ಸಹಿತ ಸ್ಥಳೀಯರು ನೀರಿಗಿಳಿದು ಯಕ್ಷಿತ್ ನನ್ನು ರಕ್ಷಿಸಿದರೂ ಅಜಿತ್ ಮತ್ತು ಮನೀಷ್ ಅವರನ್ನು ಮೇಲಕ್ಕೆತ್ತುವ ವೇಳೆ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದರು.
ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕಾಟಿ ಪಳ್ಳ, ಗ್ರಾಮ ಲೆಕ್ಕಾಧಿಕಾರಿ ಜನಾರ್ಧನ್, ಪ್ರದೀಪ್, ತಾಲೂಕು ಕಚೇರಿ ಸಿಬಂದಿ ಸದಾಶಿವ ಕೈಕಂಬ ಮಹಜರು ನಡೆಸಿದರು.