ಬಂಟ್ವಾಳ: ಬಂಟ್ವಾಳದಲ್ಲಿ ನಾನು ಸ್ಪರ್ಧಿಸಿದ್ದ ಸಂದರ್ಭ ವಿಧಾನಸಭೆ ಚುನಾವಣೆಯಲ್ಲಿ 16 ಸಾವಿರ ಲೀಡ್ ಬಂದಿತ್ತು. ಈ ಬಾರಿ ಅದರ ದುಪ್ಪಟ್ಟು ಅಂದರೆ 30 ಸಾವಿರದಷ್ಟು ಲೀಡ್ ನಳಿನ್ ಕುಮಾರ್ ಕಟೀಲ್ ಅವರಿಗೆ ದೊರಕಿದ್ದು, ಇದು ಬಂಟ್ವಾಳದಲ್ಲೂ ಬಿಜೆಪಿಯ ಪರವಾಗಿ ಜನರಿದ್ದಾರೆ ಎಂಬುದರ ದ್ಯೋತಕ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಗುರುವಾರ ಬಿ.ಸಿ.ರೋಡಿನ ಬಿ.ಜೆ.ಪಿ. ಕಚೇರಿಯಲ್ಲಿ ಹಾಕಲಾದ ಬೃಹತ್ ಪರದೆಯಲ್ಲಿ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ವೀಕ್ಷಿಸುತ್ತಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಿದ್ದಾರೆ ಎಂಬ ಖುಷಿಯಲ್ಲಿ ಇಡೀ ದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ಈಗಾಗಲೇ 350ಕ್ಕೂ ಮಿಕ್ಕಿ ಲೋಕಸಭಾ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದೇವೆ, ಪ್ರಧಾನಿ ನರೇಂದ್ರ ಮೋದಿ ಮೇಲೆ ವಿಶ್ವಾಸವನ್ನು ದೇಶದ ಜನ ಇಟ್ಟಿದ್ದು, ಇಂದಿನ ಫಲಿತಾಂಶದಿಂದ ವ್ಯಕ್ತವಾಗುತ್ತಿದೆ. ರಾಜ್ಯದಲ್ಲೂ ಬಿಜೆಪಿ 25 ಸ್ಥಾನ ಗಳಿಸುವ ಮೂಲಕ ರಾಜ್ಯ ಸರಕಾರದ ನೀತಿಯನ್ನು ವಿರೋಧಿಸಿರುವುದು ಕಂಡುಬಂದಿದೆ, ಬಿಜೆಪಿ ಪರ ಜನರಿದ್ದಾರೆ ಎಂದರು.
ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ್ ಶೆಟ್ಟಿ, ರಾಜ್ಯ ಉಪಾಧ್ಯಕ್ಷೆ ಸುಲೋಚನಾ ಭಟ್, ಪ್ರಮುಖರಾದ ಪುರಸಭಾ ಸದಸ್ಯ ಗೋವಿಂದ ಪ್ರಭು, ಜಿಲ್ಲಾ ಪಂಚಾಯತ್ ಸದಸ್ಯೆ ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ಯುವ ಮೋರ್ಚಾ ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಜಿಪಂ ಮಾಜಿ ಸದಸ್ಯ ಚೆನ್ನಪ್ಪ ಕೋಟ್ಯಾನ್, ಪಕ್ಷ ಪ್ರಮುಖರಾದ ರಮಾನಾಥ ರಾಯಿ ಮೊದಲಾದವರು ಉಪಸ್ಥಿತರಿದ್ದರು.