ವಾಸ್ತವ

ಖುದ್ದು ಯಡಿಯೂರಪ್ಪ ಅವರೂ 25 ಸ್ಥಾನ ಬರುತ್ತದೆ ಎಂದಿರಲಿಲ್ಲ….!!

ಹರೀಶ ಮಾಂಬಾಡಿ ಬಂಟ್ವಾಳನ್ಯೂಸ್

ಪ್ರತಿ ಬಾರಿ ಮಾಧ್ಯಮಗಳೊಂದಿಗೆ ಮಾತನಾಡಿದಾಗಲೂ ಕರ್ನಾಟಕದಲ್ಲಿ ಬಿಜೆಪಿ 22 ಸೀಟು ಗಳಿಸುತ್ತದೆ. ನೋಡ್ತಾ ಇರಿ, ರಾಜ್ಯ ಸರಕಾರ ಪತನವಾಗುತ್ತದೆ. ಅದಕ್ಕೆ ಜನಬೆಂಬಲ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುತ್ತಲೇ ಇದ್ದರು. ಅದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀರಾ ನಿರ್ಲಕ್ಯದಿಂದ ತಳ್ಳಿಹಾಕುತ್ತಾ ಯಡಿಯೂರಪ್ಪ ಕನಸು ಕಾಣುತ್ತಿದ್ದಾರೆ ಎಂದು ಹೇಳಿದರೆ, ಸಿಎಂ ಕುಮಾರಸ್ವಾಮಿ ನಗೆ ಬೀರಿ ಅವರು ಹೇಳ್ತಾನೇ ಇರ್ತಾರೆ ಎಂದು ವ್ಯಂಗ್ಯವಾಡುತ್ತಿದ್ದರು. ಆದರೆ ಈಗ ಬಿಜೆಪಿಯೇ ಮುಟ್ಟಿ ನೋಡುವಂಥ ಪರಿಸ್ಥಿತಿ ಬಂದಿದೆ!!. ಯಡಿಯೂರಪ್ಪ 22 ಸೀಟು ಬರುತ್ತದೆ ಎಂದಿದ್ದರೆ, ಬಿಜೆಪಿ 25 ಸ್ಥಾನಗಳನ್ನು ಗಳಿಸಿ ಅಭೂತಪೂರ್ವ ಜಯ ಸಾಧಿಸಿದೆ. 

ಆಡಳಿತ ನಡೆಸುತ್ತಿರುವ ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟ ಕೇವಲ ಒಂದೊಂದು ಸ್ಥಾನ ಗಳಿಸಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಜಯ ಗಳಿಸಿದ ಸುಮಲತಾ ಅವರೂ ಬಿಜೆಪಿ ಬೆಂಬಲಿತರು. ಸುಮಲತಾ ಇನ್ನು ಬಿಜೆಪಿಯನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂಬುದು ಬೇರೆ ಮಾತು.

ಅಚ್ಚರಿಯೆಂದರೆ ಘಟಾನುಘಟಿ ನಾಯಕರು, ಪ್ರಧಾನಮಂತ್ರಿಯಾಗುವ ಅರ್ಹತೆ ಉಳ್ಳವರು ಎಂದೇ  ಬಿಂಬಿಸಲಾಗುತ್ತಿದ್ದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ, ಈ ಬಾರಿಯೂ ಘಟಬಂಧನ ಸರಕಾರ ಬಂದರೆ ಪ್ರಧಾನಿಯಾಗುವ ಅಪೇಕ್ಷೆಯನ್ನು ಹೊತ್ತಿದ್ದ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಶಾಲಿ ನಾಯಕ ಎಂದೇ ಹೇಳಲಾಗುತ್ತಿರುವ ಬಿ.ಕೆ.ಹರಿಪ್ರಸಾದ್, ಮಾತಿನ ಮೂಲಕ ಗಮನ ಸೆಳೆಯುತ್ತಿದ್ದ ವಿ.ಎಸ್.ಉಗ್ರಪ್ಪನಂಥ ನಾಯಕರು ಸೋಲಿನ ರುಚಿ ಕಂಡರೆ, ಇಡೀ ರಾಜ್ಯವನ್ನೇ ತನ್ನ ಗಮನ ಸೆಳೆಯುವಂತೆ ಮಾಡಿದ, ಮುಖ್ಯಮಂತ್ರಿಯಾದಿಯಾಗಿ ರಾಜ್ಯದ ಘಟಾನುಘಟಿ ಮಂತ್ರಿಗಳೆಲ್ಲ ಬಂದು ಪ್ರಚಾರ ಮಾಡಿದ ಮಂಡ್ಯದಲ್ಲಿ ಕಣಕ್ಕಿಳಿದ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲು ಕಂಡಿರುವುದು ರಾಜ್ಯ ಸರಕಾರದ ನೊಗ ಹೊತ್ತಿರುವ ಮೈತ್ರಿ ಪಕ್ಷದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬಿಜೆಪಿಯಲ್ಲಿ ಹಲವು ಸಂಸದರು ಲೋಕಸಭೆಗೆ ಮರುಪ್ರವೇಶ ಮಾಡುತ್ತಿದ್ದರೆ, ತೇಜಸ್ವಿ ಸೂರ್ಯರಂಥ ಯುವನಾಯಕರೂ ಗೆದ್ದಿರುವುದು ಗಮನ ಸೆಳೆಯುವಂತೆ ಮಾಡಿದೆ. ಇದೆಲ್ಲ ಮೋದಿ ಅಲೆ ಎಂದು ಹೇಳಿದರೂ ರಾಜ್ಯ ಸರಕಾರ ವಿರೋಧಿ ಅಲೆಯೂ ಇದೆ ಎಂದು ಬಿಜೆಪಿ ಸ್ಥಳೀಯ ನಾಯಕರು ಹೇಳಿದ್ದಾರೆ.

ಮೌಲ್ಯಾಧಾರಿತ ರಾಜಕಾರಣಿ ಎಂದೇ ಹೆಸರು ಪಡೆದಿದ್ದ ರಾಮಕೃಷ್ಣ ಹೆಗಡೆ 1983 ಮತ್ತು 1985ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು.

ಅಂದ ಹಾಗೆ 1983ರಲ್ಲಿ ಕಾಂಗ್ರೆಸ್ ನ ಗುಂಡೂರಾವ್ ಸರಕಾರವನ್ನು ಕೆಡಹಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷದ ಸರಕಾರ 1984ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುತೇಕ ಸ್ಥಾನಗಳನ್ನು ಗಳಿಸಿ, ಜನತಾ ಪಕ್ಷದ ಅಭ್ಯರ್ಥಿಗಳನ್ನು ಸೋಲುಣಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಲು ಶಿಫಾರಸು ಮಾಡಿದ್ದರು. ಇದಕ್ಕೆ ಅವರು ನೀಡಿದ್ದ ಕಾರಣ ಜನಾದೇಶ ತನ್ನ ಸರಕಾರದ ವಿರುದ್ಧವಾಗಿದೆ. ಅಷ್ಟೇ ಎದೆಗಾರಿಕೆಯೊಂದಿಗೆ ಜನತಾ ಪಕ್ಷ ಚುನಾವಣೆಗೆ ಸ್ಪರ್ಧಿಸಿ, ರಾಜ್ಯದಲ್ಲಿ ಮತ್ತೆ ಅಧಿಕಾರ ಗಳಿಸಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತದಾರ ತೀರ್ಪು ನೀಡಿದ್ದರೆ, ವಿಧಾನಸಭೆಯಲ್ಲಿ ಜನತಾ ಪಕ್ಷವನ್ನು ಮತದಾರ  ಬೆಂಬಲಿಸಿದ್ದ. ಈ ಸನ್ನಿವೇಶದಲ್ಲಿ ರಾಜ್ಯವನ್ನಾಳುವ ನಾಯಕರಿಗೆ ವಿಧಾನಸಭೆ ವಿಸರ್ಜಿಸಿ ಮತ್ತೆ ಜನಾದೇಶ ಪಡೆದು ಅಧಿಕಾರಕ್ಕೆ ಬರುವ ಧೈರ್ಯವಿದೆಯೇ ಎಂಬುದನ್ನು ಕಾಲವೇ ಉತ್ತರಿಸಬೇಕು.

ರಾಜ್ಯದಲ್ಲಿ ಇರುವ 28 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದವರು ಯಾರು, ಸೋತವರು ಯಾರು ಇಲ್ಲಿದೆ ವಿವರ ನೋಡಿ.

ಸಂಖ್ಯೆ ಕ್ಷೇತ್ರ ಗೆದ್ದವರು ಸೋತವರು
1 ಚಿಕ್ಕೋಡಿ ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ) ಪ್ರಕಾಶ್ ಹುಕ್ಕೇರಿ (ಕಾಂಗ್ರೆಸ್)
2 ಬೆಳಗಾವಿ ಸುರೇಶ್ ಅಂಗಡಿ (ಬಿಜೆಪಿ) ಡಾ.ವಿ.ಎಸ್.ಸಾಧುನವರ್ (ಕಾಂಗ್ರೆಸ್)
3 ಬಾಗಲಕೋಟೆ ಪಿ.ಸಿ.ಗದ್ದೀಗೌಡರ್ (ಬಿಜೆಪಿ) ವೀಣಾ ಕಾಶಪ್ಪನವರ್ (ಕಾಂಗ್ರೆಸ್)
4 ವಿಜಯಪುರ ರಮೇಶ್ ಜಿಗಜಿಣಗಿ (ಬಿಜೆಪಿ) ಡಾ. ಸುನೀತಾ ಚವ್ಹಾಣ್ (ಕಾಂಗ್ರೆಸ್)
5 ಕಲಬುರಗಿ ಉಮೇಶ್ ಜಾಧವ್ (ಬಿಜೆಪಿ) ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
6 ರಾಯಚೂರು ರಾಜಾ ಅಮರೇಶ್ ನಾಯಕ (ಬಿಜೆಪಿ) ಬಿ.ವಿ.ನಾಯಕ್ (ಕಾಂಗ್ರೆಸ್)
7 ಬೀದರ್ ಭಗವಂತ ಖೂಬಾ (ಬಿಜೆಪಿ) ಈಶ್ವರ ಖಂಡ್ರೆ (ಕಾಂಗ್ರೆಸ್)
8 ಕೊಪ್ಪಳ ಕರಡಿ ಸಂಗಣ್ಣ (ಬಿಜೆಪಿ) ರಾಜಶೇಖರ ಹಿಟ್ನಾಳ್ (ಕಾಂಗ್ರೆಸ್)
9 ಬಳ್ಳಾರಿ ದೇವೇಂದ್ರಪ್ಪ (ಬಿಜೆಪಿ) ವಿ.ಎಸ್.ಉಗ್ರಪ್ಪ (ಕಾಂಗ್ರೆಸ್)
10 ಹಾವೇರಿ ಶಿವಕುಮಾರ ಉದಾಸಿ (ಬಿಜೆಪಿ) ಡಿ.ಆರ್.ಪಾಟೀಲ್ (ಕಾಂಗ್ರೆಸ್)
11 ಧಾರವಾಡ ಪ್ರಹ್ಲಾದ ಜೋಷಿ (ಬಿಜೆಪಿ) ವಿನಯ್ ಕುಲಕರ್ಣಿ (ಕಾಂಗ್ರೆಸ್)
12 ಉತ್ತರ ಕನ್ನಡ ಅನಂತಕುಮಾರ್ ಹೆಗಡೆ (ಬಿಜೆಪಿ) ಆನಂದ ಅಸ್ನೋಟಿಕರ್ (ಜೆಡಿಎಸ್)
13 ದಾವಣಗೆರೆ ಜಿ.ಎಂ.ಸಿದ್ದೇಶ್ವರ್ (ಬಿಜೆಪಿ) ಹೆಚ್.ಬಿ.ಮಂಜಪ್ಪ (ಕಾಂಗ್ರೆಸ್)
14 ಶಿವಮೊಗ್ಗ ಬಿ.ವೈ.ರಾಘವೇಂದ್ರ (ಬಿಜೆಪಿ) ಮಧು ಬಂಗಾರಪ್ಪ (ಜೆಡಿಎಸ್)
15 ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ (ಬಿಜೆಪಿ) ಪ್ರಮೋದ್ ಮಧ್ವರಾಜ್ (ಜೆಡಿಎಸ್)
16 ಹಾಸನ ಪ್ರಜ್ವಲ್ ರೇವಣ್ಣ (ಜೆಡಿಎಸ್) ಎ.ಮಂಜು (ಬಿಜೆಪಿ)
17 ದಕ್ಷಿಣ ಕನ್ನಡ ನಳಿನ್ ಕುಮಾರ್ ಕಟೀಲ್ (ಬಿಜೆಪಿ) ಮಿಥುನ್ ರೈ (ಕಾಂಗ್ರೆಸ್)
18 ಚಿತ್ರದುರ್ಗ ಎ.ನಾರಾಯಣಸ್ವಾಮಿ (ಬಿಜೆಪಿ) ಬಿ.ಎನ್.ಚಂದ್ರಪ್ಪ (ಕಾಂಗ್ರೆಸ್)
19 ತುಮಕೂರು ಜಿ.ಎಸ್.ಬಸವರಾಜ್ (ಬಿಜೆಪಿ) ಹೆಚ್.ಡಿ.ದೇವೇಗೌಡ (ಜೆಡಿಎಸ್)
20 ಮಂಡ್ಯ ಸುಮಲತಾ (ಪಕ್ಷೇತರ) ನಿಖಿಲ್ ಕುಮಾರಸ್ವಾಮಿ (ಜೆಡಿಎಸ್)
21 ಮೈಸೂರು-ಕೊಡಗು ಪ್ರತಾಪ್ ಸಿಂಹ (ಬಿಜೆಪಿ) ಸಿ.ಹೆಚ್.ವಿಜಯ ಶಂಕರ್ (ಕಾಂಗ್ರೆಸ್)
22 ಚಾಮರಾಜ ನಗರ ಶ್ರೀನಿವಾಸ ಪ್ರಸಾದ್ (ಬಿಜೆಪಿ) ಧ್ರುವನಾರಾಯಣ್ (ಕಾಂಗ್ರೆಸ್)
23 ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ್ (ಕಾಂಗ್ರೆಸ್) ಅಶ್ವತ್ಥ ನಾರಾಯಣ (ಬಿಜೆಪಿ)
24 ಬೆಂಗಳೂರು ಉತ್ತರ ಸದಾನಂದ ಗೌಡ (ಬಿಜೆಪಿ) ಕೃಷ್ಣ ಭೈರೇಗೌಡ (ಕಾಂಗ್ರೆಸ್)
25 ಬೆಂಗಳೂರು ಸೆಂಟ್ರಲ್ ಪಿ.ಸಿ.ಮೋಹನ್ (ಬಿಜೆಪಿ) ರಿಜ್ವಾನ್ ಅರ್ಷದ್ (ಕಾಂಗ್ರೆಸ್)
26 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ (ಬಿಜೆಪಿ) ಬಿ.ಕೆ.ಹರಿಪ್ರಸಾದ್ (ಕಾಂಗ್ರೆಸ್)
27 ಚಿಕ್ಕಬಳ್ಳಾಪುರ ಬಿ.ಎನ್.ಬಚ್ಚೇಗೌಡ (ಬಿಜೆಪಿ) ಎಂ.ವೀರಪ್ಪ ಮೊಯಿಲಿ (ಕಾಂಗ್ರೆಸ್)
28 ಕೋಲಾರ ಮುನಿಸ್ವಾಮಿ (ಬಿಜೆಪಿ) ಕೆ.ಹೆಚ್.ಮುನಿಯಪ್ಪ (ಕಾಂಗ್ರೆಸ್)
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ