ದಕ್ಷಿಣ ಕನ್ನಡ ಜಿಲ್ಲಾದ್ಯಂತ ನೀರು ವಿತರಣೆ ಮತ್ತು ಪೂರೈಕೆ ಸಂಬಂಧ ಉಪವಿಭಾಗಾಧಿಕಾರಿ ಹಾಗೂ ಇಂಜಿನಿಯರ್‌ಗಳಿಗೆ ನೀರು ನಿರ್ವಹಣೆ ಹೊಣೆ ವಹಿಸಲಾಗಿದೆ.
ಎಲ್ಲರೂ ಮುನ್ನೆಚ್ಚರಿಕೆ ವಹಿಸಿ ಎತ್ತರದ ಪ್ರದೇಶಗಳಿಗೆ ಹಾಗೂ ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಮುಂಚೆಯೇ ಗುರುತಿಸಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಇದಕ್ಕಾಗಿ ಸೂಕ್ರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ಜಿಲ್ಲೆಯಲ್ಲಿ ಅನಾವೃಷ್ಟಿ ಮತ್ತು ಅತಿವೃಷ್ಟಿ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಹೀಗೆ ಮಾಹಿತಿ ನೀಡಿದವರು ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್.
ಮಂಗಳೂರು ಮತ್ತು ಬಂಟ್ವಾಳ ತಾಲೂಕಿನ ಕೆಲವು ಪ್ರದೇಶಗಳಲ್ಲಿ ನೀರಿನ ಅಭಾವವಿದ್ದು, ಪ್ರತಿ ತಾಲೂಕಿಗೆ ಬರ ನಿರ್ವಹಣೆಗೆ 25 ಲಕ್ಷ ರೂ. ನೀಡಲಾಗಿದೆ ಎಂದು ಸಿಇಒ ಮಾಹಿತಿ ನೀಡಿದರು
ಗ್ರಾಮೀಣ ವ್ಯಾಪ್ತಿಯಲ್ಲಿ ನೀರು ನಿರ್ವಹಣೆಗೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಆರ್.ಸೆಲ್ವಮಣಿ ಖುದ್ದು ಉಸ್ತುವಾರಿ ವಹಿಸಿ ಸಂಬಂಧಪಟ್ಟ ಕಾರ್ಯನಿರ್ವಹಣಾಧಿಕಾರಿಗಳ ಜತೆ ನಿರ್ವಹಣೆ ಯೋಜನೆಗಳನ್ನು ಅವಲೋಕಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಉಳ್ಳಾಲ, ಮೂಲ್ಕಿ, ಮೂಡುಬಿದಿರೆಯಲ್ಲಿ ನೀರು ನಿರ್ವಹಣೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಉಸ್ತುವಾರಿ ಸಚಿವರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಟ್ಯಾಂಕರ್ ಮುಖಾಂತರ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಬೋರ್‌ವೆಲ್ ಕೊರೆಸಲು ಅನುಮತಿ ನೀಡಲಾಗಿದೆ .ಉಳ್ಳಾಲ, ಮೂಲ್ಕಿಯ ಮುಖ್ಯಾಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದು, ನೀರು ನಿರ್ವಹಣೆಗೆ ಸಹಕಾರ ನೀಡದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದರು.
ಮೂಡುಬಿದಿರೆ ಮತ್ತು ಬಂಟ್ವಾಳದಲ್ಲಿ ಎರಡು ದಿನಕ್ಕೊಮ್ಮೆ ನೀರು ಪೂರೈಸುತ್ತಿದ್ದು, ಬಂಟ್ವಾಳದಲ್ಲಿ ನೀರು ಪೂರೈಕೆ ಸಂಬಂಧ ಇದ್ದ ಸಮಸ್ಯೆ ಸರಿಪಡಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ರವಿಚಂದ್ರ ನಾಯಕ್ ಹೇಳಿದರು. ಪುತ್ತೂರಿನಲ್ಲಿ ನೀರಿಗೆ ಸಮಸ್ಯೆಯಾಗಿಲ್ಲ ಎಂದು ಎಸಿ ಕೃಷ್ಣಮೂರ್ತಿ ತಿಳಿಸಿದರು. ಪುತ್ತೂರಿನ ಕೆಲವು ಪ್ರದೇಶಗಳಲ್ಲಿ ನೀರಿದ್ದರೂ ಲೋ ವೋಲ್ಟೇಜ್ ಸಮಸ್ಯೆಯಿದೆ ಎಂದು ಸಿಇಒ ತಿಳಿಸಿದರು.