ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಈ ವಿಡಿಯೋವನ್ನು ನೋಡಿ
ಈ ಚಿತ್ರಗಳನ್ನು ನೋಡಿರಿ.
ಬಿ.ಸಿ.ರೋಡ್, ಬಂಟ್ವಾಳ, ಮೇಲ್ಕಾರ್ ನಡೆಯುವವರಿಗೆ, ಬಸ್ ಹತ್ತುವವರಿಗೆ ಬಸ್ ಗಾಗಿ ನಿಲ್ಲುವವರಿಗೆ ಸುರಕ್ಷಿತವೇ?
ಶಾಲಾ ಕಾಲೇಜುಗಳ ಆರಂಭ ಸನ್ನಿಹಿತವಾಗುತ್ತಿರುವುದು ಒಂದೆಡೆಯಾದರೆ, ಮದುವೆ ಇನ್ನಿತರ ಸಮಾರಂಭಗಳಿಂದಾಗಿ ರಸ್ತೆಯಲ್ಲಿ ವಾಹನಗಳ ಭರಾಟೆ ಎಂದಿಗಿಂತ ಜಾಸ್ತಿಯೇ ಇದೆ. ಆದರೆ ಅಪಘಾತಗಳಿಗೆ ಎಡೆ ಮಾಡುವ ಆಯಕಟ್ಟಿನ ಜಾಗಗಳು ಪ್ರತಿ ಹೆಜ್ಜೆಗೂ ಅಪಾಯಕಾರಿಯಾಗಿ ಪರಿಣಮಿಸಿವೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ.ಸಿ.ರೋಡ್, ಬಂಟ್ವಾಳ, ಪಾಣೆಮಂಗಳೂರು, ಮೇಲ್ಕಾರ್ ಭಾಗಗಳಲ್ಲಿ ವಾಹನ ಸವಾರರು ಹೋಗುವ ಸಂದರ್ಭ ಎಚ್ಚರ ವಹಿಸುವುದು ಒಳಿತು. ಬಿ.ಸಿ.ರೋಡ್ ಸರ್ಕಲ್ ನಿಂದ ಧರ್ಮಸ್ಥಳ ಕಡೆಗೆ ಹೋಗುವುದಿದ್ದರೆ, ಬಿ.ಸಿ.ರೋಡ್ ಜಂಕ್ಷನ್ (ನಾರಾಯಣಗುರು ವೃತ್ತ)ದಿಂದ ಬೈಪಾಸ್ ರಸ್ತೆಯಲ್ಲಿ ಸಾಗಬೇಕು. ಬಲಕ್ಕೆ ತಿರುಗಿದರೆ ಬಂಟ್ವಾಳ ಪೇಟೆ ಸಿಗುತ್ತದೆ. ಬಂಟ್ವಾಳ ಪೇಟೆಗೆ ಹೋಗುವುದಿದ್ದರೆ, ಬೈಪಾಸ್ ರಸ್ತೆಯಿಂದ ಬಿ.ಸಿ.ರೋಡ್ ಕಡೆಗೆ ಬರುವ ವಾಹನಗಳು ಎದುರು ಸಿಗದಂತೆ ನೋಡಿಕೊಳ್ಳಬೇಕು. ರಾತ್ರಿ ಇಲ್ಲಿ ತೀರಾ ಅಪಾಯಕಾರಿ. ಈ ಜಾಗದಲ್ಲೇ ಕಳೆದ ವರ್ಷ ಕಾಲೇಜೊಂದರ ಉಪನ್ಯಾಸಕ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಪರಿಣಾಮ, ಅವರ ಇಡೀ ಸಂಸಾರವೇ ತೊಂದರೆಗೊಳಗಾಯಿತು.
ಬಿ.ಸಿ.ರೋಡ್ ಫ್ಲೈಓವರ್ ಕೊನೆಯಾಗುವ ಸ್ಥಳ ಹಾಗೂ ಸರ್ವೀಸ್ ರಸ್ತೆಯಿಂದ ಬಿ.ಸಿ.ರೋಡ್ ಫ್ಲೈಓವರ್ ಸಂಧಿಸುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಎದುರಿನ ಜಾಗ ಮತ್ತಷ್ಟು ಅಪಾಯಕಾರಿ. ಸರ್ವೀಸ್ ರಸ್ತೆಯಿಂದ ಕೆಎಸ್ಸಾರ್ಟಿಸಿಗೆ ಹೋಗುವ ಬಸ್ಸುಗಳು ಒಂದೆಡೆ, ರಸ್ತೆಯಿಂದ ಹೆದ್ದಾರಿ ಸೇರುವ ಜಾಗ ಇನ್ನೊಂದೆಡೆ ಹೀಗೆ ಇಲ್ಲಿ ಯಾವ ದಿಕ್ಕಿನಲ್ಲಿ ತಿರುಗಿದರೂ ಸಮಸ್ಯೆಯೇ. ಆದರೆ ವಿಧಿ ಇಲ್ಲದೆ ವಾಹನ ಸವಾರರು ಕೆಲವೊಮ್ಮೆ ನಿಯಮ ಉಲ್ಲಂಘಿಸಿ ತಿರುಗುವ ಪರಿಸ್ಥಿತಿ ಇರುತ್ತದೆ.
ಬಿ.ಸಿ.ರೋಡಿನ ಅಜ್ಜಿಬೆಟ್ಟು, ಪೋಸ್ಟ್ ಆಫೀಸ್ ಕಡೆಗೆ ತಿರುಗುವ ಜಾಗ ಅಪಾಯಕ್ಕೆ ಆಹ್ವಾನ ಮಾಡುವಂತಿದೆ. ಸಾಮಾನ್ಯವಾಗಿ ಫ್ಲೈ ಓವರ್ ನಲ್ಲಿ ಬಿ.ಸಿ.ರೋಡಿಗೆ ಬಂದವರು ಈ ಭಾಗದಲ್ಲಿರುವ ಹೋಟೆಲ್, ಪೋಸ್ಟ್ ಆಫೀಸ್, ದವಾಖಾನೆಗಳಿಗೆ ತಿರುಗಬೇಕು ಎಂದಿದ್ದರೆ, ಯೂಟರ್ನ್ ತೆಗೆದುಕೊಳ್ಳಬೇಕು. ಆಗ ಮಂಗಳೂರಿನ ಕಡೆಯಿಂದ ವಾಹನಗಳು ಬರುವ ಸಂದರ್ಭ ಅಪಾಯಗಳು ಉಂಟಾಗದಂತೆ ಎಚ್ಚರ ವಹಿಸಬೇಕು.
ಬಿ.ಸಿ.ರೋಡಿನ ಪ್ರಮುಖ ಜಾಗವಾದ ರಕ್ತೇಶ್ವರಿ ದೇವಸ್ಥಾನ, ಮಿನಿ ವಿಧಾನಸೌಧದ ಕಡೆಯಿಂದ ಹೆದ್ದಾರಿ ಸಂಧಿಸುವ ಜಾಗವನ್ನು ಫ್ಲೈಓವರ್ ದಾಟಿ ತಲುಪಬೇಕು. ಈ ಸಂದರ್ಭ ಇಲ್ಲೂ ವಾಹನದಟ್ಟಣೆ ಉಂಟಾಗುತ್ತಿದ್ದು, ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಸರ್ವೀಸ್ ರಸ್ತೆಯಲ್ಲಿ ಸಾಗುವ ವಾಹನಗಳು ಒಂದೆಡೆ ಹೆದ್ದಾರಿಗೆ ಹೋಗುವ ವಾಹನಗಳು ಇನ್ನೊಂದೆಡೆ ಇದ್ದರೆ, ಆ ಭಾಗಗಳಿಂದ ಮಿನಿ ವಿಧಾನಸೌಧದೆಡೆ ಬರುವ ವಾಹನಗಳು ಎದುರುಬದುರಾಗುತ್ತವೆ. ಇಲ್ಲಿ ಸರಿಯಾದ ಲೇನ್ ಇಲ್ಲದ ಕಾರಣ ಯಾವ ವಾಹನಗಳು ಎಲ್ಲಿ ತಿರುಗಬೇಕು ಎಂಬ ಗೊಂದಲಕ್ಕೆ ಒಳಗಾಗಿ ಕೆಲವೊಮ್ಮೆ ಟ್ರಾಫಿಕ್ ಜಾಮ್, ಅಥವಾ ಅಪಘಾತಕ್ಕೆ ರಹದಾರಿಯಾಗುವ ಸಂಭವವೂ ಇರುತ್ತದೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯ ಮೇಲ್ಕಾರ್ ಪರಿಸರದಲ್ಲಿರುವ ಜಂಕ್ಷನ್ ತೀರಾ ಅಪಾಯಕಾರಿ ಎಂದು ಆಗಾಗ್ಗೆ ಸಾಬೀತಾಗುತ್ತಿರುತ್ತದೆ. ಕಳೆದ ಎರಡು ವರ್ಷಗಳಲ್ಲಿ ಆಗಾಗ್ಗೆ ಸಣ್ಣಪುಟ್ಟ ಅಪಘಾತಗಳು ಸಂಭವಿಸಿದ್ದು, ಎರಡು ಬಲಿಯೂ ಆಗಿವೆ.
ಪ್ರಯಾಣಿಕರಿಗೂ ಕಷ್ಟ:
ಬಿ.ಸಿ.ರೋಡಿನಲ್ಲಿ ಸುಮಾರು ಹದಿನೆಂಟು ವರ್ಷಗಳ ಹಿಂದೆ ಇದ್ದ ಪ್ರಯಾಣಿಕರ ಬಸ್ ತಂಗುದಾಣವನ್ನು ಕೆಡಹಿ ಪುರಸಭೆ ಬಸ್ ನಿಲುಗಡೆ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಿಸಿದಂದಿನಿಂದ ಪುತ್ತೂರು, ಧರ್ಮಸ್ಥಳ, ಬೆಂಗಳೂರು, ಮೈಸೂರು, ಉಪ್ಪಿನಂಗಡಿ ಕಡೆಗಳಿಗೆ ಹೋಗುವ ಪ್ರಯಾಣಿಕರಿಗೆ ಸರಿಯಾದ ನೆಲೆ ಇಲ್ಲ. ಇದರ ಜೊತೆಗೆ ಮಂಗಳೂರಿನಿಂದ ಬರುವ ಬಸ್ಸುಗಳಿಂದ ಪ್ರಯಾಣಿಕರನ್ನು ಇಳಿಸಲೂ ಸೂಕ್ತವಾದ ಜಾಗ ದೊರಕಿಲ್ಲ. ಪೊಳಲಿ, ಮೇಲ್ಕಾರು, ಮುಡಿಪು, ಮೂಡುಬಿದಿರೆ ಸಹಿತ ಗ್ರಾಮೀಣ ಪ್ರದೇಶದ ಕಡೆಗೆ ತೆರಳುವ ಬಸ್ಸುಗಳಿಗೆ ಮತ್ತು ಅವುಗಳಲ್ಲಿ ತೆರಳುವ ಪ್ರಯಾಣಿಕರಿಗೆ ಈ ಬಸ್ ತಂಗುದಾಣ ಮೀಸಲಾಗಿದೆ. ಈ ಹಿನ್ನೆಲೆಯಲ್ಲಿ ಇತರ ಪ್ರದೇಶಗಳಿಗೆ ತೆರಳುವ ಜನರು ಹೆದ್ದಾರಿ ಬದಿಯಲ್ಲೇ ನಿಲ್ಲಬೇಕಾಗಿದ್ದು, ಆ ಜಾಗಗಳಿಗೆ ತೆರಳುವ ಬಸ್ಸುಗಳೂ ಹೆದ್ದಾರಿಯಲ್ಲೇ ಜನರನ್ನು ಹತ್ತಿಸಿಕೊಳ್ಳಬೇಕು. ಒಂದೆಡೆಯಲ್ಲಿ ಮಂಗಳೂರಿನಿಂದ ಬರುವ ಜನರನ್ನು ಇಳಿಸುವುದು ಹಾಗೂ ಜನರನ್ನು ಹತ್ತಿಸಿಕೊಳ್ಳುವುದನ್ನು ಮಾಡಬೇಕಾಗಿದ್ದು, ಅದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಅಗಲಗೊಳಿಸುವ ಪ್ರಕ್ರಿಯೆ ಸಂದರ್ಭ ನೆಲದಿಂದ ಎತ್ತರಕ್ಕೆ ಹೆದ್ದಾರಿ ರಸ್ತೆ ಇರುವ ಕಾರಣ ಪ್ರಯಾಣಿಕರಿಗೆ ಬಸ್ ಹತ್ತುವುದು, ಇಳಿಯುವುದು ಸಮಸ್ಯೆಯಾಗಿಯೇ ಪರಿಣಮಿಸಿದೆ. ಈ ಕುರಿತು ಸಾಕಷ್ಟು ಬಾರಿ ಜನಪ್ರತಿನಿಧಿಗಳಲ್ಲಿ ದೂರಿಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮಳೆ, ಬಿಸಿಲು, ಚಳಿ ಎನ್ನದೆ ಪ್ರಯಾಣಿಕರು ಇಲ್ಲಿ ಪರದಾಟ ನಡೆಸುವ ಕಾರಣ ಬಸ್ ಹತ್ತುವುದು, ಇಳಿಯುವ ಸಂದರ್ಭ ಸಮಯ ಬೇಕಾಗುತ್ತದೆ. ಈ ಸಂದರ್ಭ ಒಂದರ ಹಿಂದೆ ಮತ್ತೊಂದು ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಕಳೆದ ಮೂರು ನಾಲ್ಕು ತಿಂಗಳಿಂದ ವಾಹನಗಳ ಸಂಖ್ಯೆ ಅಧಿಕವಾಗತೊಡಗಿದ್ದು, ಇವುಗಳನ್ನು ನಿಯಂತ್ರಿಸುವುದು ಕಷ್ಟ ಎನ್ನುವಂಥ ಪರಿಸ್ಥಿತಿ ಇದೆ.
ಸರ್ವೀಸ್ ರಸ್ತೆಯಲ್ಲೂ ಅದೇ ಸ್ಥಿತಿ
ಬಿ.ಸಿ.ರೋಡಿನ ಸರ್ವೀಸ್ ರಸ್ತೆಯಲ್ಲೂ ಪರಿಸ್ಥಿತಿ ಭಿನ್ನವೇನಿಲ್ಲ. ಬಸ್ಸುಗಳು ಜನರನ್ನು ಇಳಿಸಿ, ಹತ್ತಿಸುವ ಕಾರ್ಯ ನಡೆಸಿ ಹಾಗೇ ತೆರಳಿದರೆ ಅಡ್ಡಿ ಇಲ್ಲ, ಆದರೆ ಹತ್ತು ನಿಮಿಷಗಳ ಕಾಲ ಜನರನ್ನು ಕೂಗಿ ಕರೆಯಲು ನಿಂತರೆ ಒಂದರ ಹಿಂದೆ ಒಂದರಂತೆ ಬಸ್ಸುಗಳು, ವಾಹನಗಳು ನಿಲ್ಲಲು ಆರಂಭಗೊಳ್ಳುತ್ತದೆ. ಪರಿಣಾಮ ಪ್ರಯಾಣಿಕರಿಗೂ ಸಮಸ್ಯೆ, ಜನರಿಗೂ ಸಮಸ್ಯೆ. ಆದರೆ ನೆಗಡಿ ಬಂದಾಗ ಮೂಗು ಕೊಯ್ದು ಬಿಡಿ ಎನ್ನುವಂತೆ ಸರ್ವೀಸ್ ರಸ್ತೆಯಲ್ಲಿ ಸಮಸ್ಯೆ ಇದೆ ಎಂದು ಬಸ್ ಸಂಚಾರವನ್ನೇ ಬಂದ್ ಮಾಡುವ ಆಲೋಚನೆಯನ್ನೂ ಮಾಡಲಾಗಿತ್ತು. ಆದರೆ ಸಾರ್ವಜನಿಕರ ಪ್ರತಿರೋಧದ ಬಳಿಕ ಇದನ್ನು ಕೈಬಿಡಲಾಯಿತು. ಬಸ್ ಬೇ ಇಲ್ಲೂ ಕಾಯಂ ಪರಿಹಾರ.