ಬಂಟ್ವಾಳದಲ್ಲಿರುವ ಶ್ರೀ ಆದಿನಾಥ ತೀರ್ಥಂಕರ ಜಿನ ಚೈತ್ಯಾಲಯದ 50ನೇ ವಾರ್ಷಿಕೋತ್ಸವ ಮೇ.24ರಿಂದ 26ರವರೆಗೆ ನಡೆಯಲಿದೆ.
ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ 3 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಕುಟುಂಬಸ್ಥರು ನೆರವೇರಿಸಲಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿ ಪ್ರಥಮವಾಗಿ ಬಂಟ್ವಾಳ ಬಸದಿಯ ಜೀರ್ಣೋದ್ಧಾರವನ್ನು ಕೈಗೊಂಡು ಪಂಚಕಲ್ಯಾಣ ಪೂರ್ವಕ ಪ್ರತಿಷ್ಠೆ ನಡೆಸಿ 50 ವರ್ಷಗಳು ಕಳೆದಿವೆ.
ಮೇ. 24ರಂದು ತೋರಣ ಮುಹೂರ್ತ, ವಿಮಾನ ಶುದ್ಧಿ, ಮುಖ ವಸ್ತ್ರ ಉದ್ಘಾಟನೆ, ಕ್ಷೇತ್ರ ಪಾಲ ಪ್ರತಿಷ್ಠೆ, ನಾಗ ಪ್ರತಿಷ್ಠೆ, 24 ಕಲಶ ಅಭಿಷೇಕ, ಮಹಾಪೂಜೆ, ನಾಂದಿ ಮಂಗಳ ವಿಧಾನ. 25ರಂದು ವಾಸ್ತು ಪೂಜೆ, ನವಗ್ರಹ ಶಾಂತಿ, ಮುಖ ವಸ್ತ್ರ ಉದ್ಘಾಟನೆ, ಮಂಗಳಾರತಿ, ಮಹಾ ಮಾತೆ ಪದ್ಮಾವತಿ ದೇವಿಯ ಪದ್ಮಾವತಿ ಆರಾಧನೆ ಮತ್ತು ಪದ್ಮಾವತಿ ಪ್ರತಿಷ್ಠೆ, ಮಹಾ ಮಾತೆ ಪದ್ಮಾವತಿ ದೇವಿಗೆ ಲಕ್ಷ ಹೂವಿನ ಪೂಜೆ, ಭ.1008 ಶ್ರೀ ಆದಿನಾಥ ತೀರ್ಥಂಕರರಿಗೆ 54 ಕಲಶ ಅಭಿಷೇಕ, ಮಹಾ ಪೂಜೆ ನಡೆಯುವುದು.
ಮೇ.26ರಂದು ಭಾನುವಾರ ಅಷ್ಟ ದಿಕ್ಷು ಧಾಮಸಂಪ್ರೋಕ್ಷಣೆ, ನಯನೋನ್ಮಿಲನ, ಮುಖ ವಸ್ತ್ರ ಉದ್ಘಾಟನೆ, ಸಾಮೂಹಿಕ ಭಕ್ತಾಮರ ಆರಾಧನೆ, ಮಹಾಪೂಜೆ, ಧಾರ್ಮಿಕ ಸಭೆ, 108 ಕಲಶ ಅಭಿಷೇಕ,ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಬಂಟ್ವಾಳ ಜೈನ್ ಮಿಲನ್ ನ ಆಶ್ರಯದಲ್ಲಿ 26ನೇ ಭಾನುವಾರ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ಜೈನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಸ್ವಸ್ತಿಶ್ರೀ ಭಾರತ ಭೂಷಣ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮತ್ತು ಡಿ.ಹೇಮಾವತಿ ಹೆಗ್ಗಡೆ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.