ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಮಾಜಿ ಸಚಿವ ಬಿ. ರಮನಾಥ ರೈ ಅವರ ನೇತೃತ್ವದಲ್ಲಿ ಪುರಸಭಾ ಚುನಾಯಿತ ಜನಪ್ರತಿನಿಧಿಗಳ ನಿಯೋಗ ಸೋಮವಾರ ಬಂಟ್ವಾಳ ಪುರಸಭೆಗೆ ಭೇಟಿ ನೀಡಿ ಮನವಿ ಸಲ್ಲಿಸಿತು.
ನೀರಿನ ಸಮಸ್ಯೆಯ ಕುರಿತಾಗಿ ಮುಖ್ಯಾಧಿಕಾರಿಯೊಂದಿಗೆ ಚರ್ಚಿಸಿದ ನಿಯೋಗ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು. ಈ ಸಂದರ್ಭ ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ ಮಾಜಿ ಸಚಿವ ರೈ ಬಂಟ್ವಾಳ ಪುರಸಭೆಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾಗೊಳಿಸಿದರೂ ನದಿಯಲ್ಲಿ ನೀರಿನ ಅಭಾವದಿಂದಾಗಿ ಯೋಜನೆ ಸಫಲತೆ ಕಂಡಿಲ್ಲ, ಇಷ್ಟು ವರ್ಷಗಳ ಕಾಲ ಪುರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಆದ್ದರಿಂದ ಹೆಚ್ಚಿನ ಆದ್ಯತೆ ನೀಡಿ ನೀರಿನ ಸಮಸ್ಯೆ ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭ ಪುರಸಭಾ ಸದಸ್ಯರಾದ ಗಂಗಾಧರ ಪೂಜಾರಿ, ಬಿ. ವಾಸು ಪೂಜಾರಿ, ಜೆಸಿಂತಾ ಡಿಸೋಜಾ, ಮಹಮ್ಮದ್ ನಂದರಬೆಟ್ಟು, ಲೋಲಾಕ್ಷ ಶೆಟ್ಟಿ, ಮಹಮ್ಮದ್ ಶರೀಫ್, ಜನಾರ್ಧನ ಚೆಂಡಿಮಾರ್, ಲುಕ್‌ಮನ್, ಹಸೈನಾರ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ಪುರಸಭೆಯ ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ, ಮಾಜಿ ಸದಸ್ಯ ಜಗದೀಶ್ ಕುಂದರ್, ಲೋಕೇಶ್ ಸುವರ್ಣ, ಪ್ರಮುಖರಾದ ಶ್ರೀಧರ ಅಮೀನ್, ವೆಂಕಪ್ಪ ಪೂಜಾರಿ, ವಿಜಯ್, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಉಪಸ್ಥಿತರಿದ್ದರು.
ಬಳಿಕ ಸುದಿಗಾರರೊಂದಿಗೆ ಮಾತನಾಡಿದ ಅವರು ನೇತ್ರಾವತಿ ನದಿಯಲ್ಲಿ ನೀರಿನ ಒರತೆ ಕಡಿಮೆಯಾಗಿ ಬಂಟ್ವಾಳ ಪುರಸಭಾ ವ್ಯಾಪ್ಯಿಯ ಜನರಿಗೂ ನೀರಿನ ಸಮಸ್ಯೆ ಉಂಟಾಗಿದೆ. ಲಭ್ಯವಾರುವ ನೀರನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿರುವುದಾಗಿ ತಿಳಿಸಿದರು. ಮುಖ್ಯಾಧಿಕಾರಿ ಮೇಬಲ್ ಡಿಸೋಜಾ, ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಇಂಜಿನಿಯರ್ ಶೋಭಾಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದು, ನೀರಿನ ಲಭ್ಯತೆಯ ಕುರಿತು ನಿಯೋಗಕ್ಕೆ ಮಾಹಿತಿ ನೀಡಿದರು.